Wednesday, 15 November 2017

ಶ್ರೀ ಚಕ್ರ, ಶ್ರೀ ವಿಧ್ಯೆ - ೫ : ಮಂತ್ರ, ಬೀಜ, ಯಂತ್ರ-ವಿಜ್ಞಾನ, ನಿಜ ಮಾತೃ ಸ್ವರೂಪಿಣಿ ಗೌರೀ!!

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]

ಉದಾಹರಣೆಗೆ:- ಒಂದು ರಥ ನಿರ್ಮಾಣ, ಅದೂ ಆಕಾಶಗಾಮಿ ರಥ. ಅದರ ಸೂತ್ರವನ್ನು ಋಗ್ವೇದದ ಸೋಮಾಧಿ ದೇವತಾತ್ಮಕವಾದ ಪವಮಾನ ಮಂತ್ರದಲ್ಲಿ ಸೇರಿಸಿ ಎಲ್ಲೆಲ್ಲಿ ಈ ಸೂತ್ರಗಳ ಒಟ್ಟು ವಿವರ ಇದೆ ಎಂದು ಕಾಣಿಸಿದರು. ಆ ಮಂತ್ರ ಹೀಗಿದೆ:

ತಂ ತ್ರಿಪೃಷ್ಠೇ ತ್ರಿವಂಧುರೇ ರಥೇ ಯುಂಜಂತಿ ಯಾತವೇ |
ಋಷೀಣಾಂ ಸಪ್ತ ಧೀತಿಭಿಃ ||

ಆದರೆ ಇಲ್ಲಿ ನಿಮಗೆ ಯಾವ ರಥ ತಂತ್ರಜ್ಞಾನ (ವಿಮಾನ ತಂತ್ರಜ್ಞಾನ) ನಿಮಗೆ ಸಿಗಲಿಕ್ಕಿಲ್ಲ, ಅದರಲ್ಲಿ ಯಾವ ಮಂತ್ರ ಎಲ್ಲಿದೆ? ಎಷ್ಟಿದೆ? ಎಂಬ ಸೂತ್ರ ಮಾತ್ರ ಸಿಗುತ್ತದೆ. ಆ ಭಾಗದ ಪರಿಚಯವಿದ್ದಲ್ಲಿ ಮಾತ್ರಾ ನೀವು ಅಲ್ಲಿ ಸಂಶೋಧನೆಯನ್ನು ಮಾಡಿ ಆ ತಂತ್ರಜ್ಞಾನವನ್ನು ಕಂಡುಹಿಡಿಯಬಹುದು. ಹಾಗೇ ನೀವು ನಾಲ್ಕು ವೇದವನ್ನು ಅಧ್ಯಯನ ಮಾಡಿ ಬ್ರಾಹ್ಮಣಾದಿಗಳನ್ನು ಮನನ ಮಾಡಿದಲ್ಲಿ ನಿಮಗೆ ಈ ವಿಚಾರ ಅರ್ಥವಾದೀತು. ಹಿಂದಿನ ಋಷಿ ಮುನಿಗಳು ತಾವು ಸಂಗ್ರಹಿಸಿದ ಸತ್ವ ಸ್ವರೂಪದ ವೈಜ್ಞಾನಿಕ ರಹಸ್ಯಗಳನ್ನು ಸುಲಭ ಸಾಧ್ಯವಾಗಿಸಲಿಲ್ಲ. ಕಾರಣ - ಧೂರ್ತ ಜನರಿಗೆ ಸಿಕ್ಕಿ ದುರುಪಯೋಗ ಆಗದಿರಲಿ ಎಂದು. ಈಗಿನ ಪ್ರಾಪಂಚಿಕ ಗಮನಿಸಿದರೆ ಶೇಕಡಾ ಒಂದು ಭಾಗ ಕೂಡಾ ಅಂತಹ ಜನರನ್ನು ಕಾಣುವುದು ಕಷ್ಟವಾಗಿದೆ. ಹೀಗಿದ್ದಾಗ ಇಂತಹ ಮಹಾ ವಿಧ್ಯೆಗಳು ಅತೀ ರಹಸ್ಯ ಸಂಯೋಜನೆಯಲ್ಲಿ ವೇದ ಭಾಗದಲ್ಲೇ ಅಳವಡಿಸಿದ್ದು, ಈ ವಿಧ್ಯೆಗಳು ರಕ್ಷಿಸಿದ್ದು ಕಂಡು ಬರುತ್ತವೆ, ಹಾಗಾಗಿ ವಿಧ್ಯೆ ನಾಶವಾಗಿಲ್ಲ. ಈ ರೀತಿಯಲ್ಲಿ ಋಷಿ ಪುಂಗವರು ಮಹದೋಪಕಾರ ಮಾಡಿದ್ದಾರೆ. ಈಗ ನಿಮಗೆ ಅರ್ಥವಾಗಿರಬಹುದು ವೇದವ್ಯಾಸರು ವೇದವನ್ನು ಏಕೆ ವಿಂಗಡಿಸಿದರು ಎಂದು. ಹೀಗೆ ಹೆಚ್ಚಾಗಿ ಹೇಳಿದ ಯಂತ್ರ ಸೂತ್ರಗಳು ಮತ್ತು ರೇಖಾ ವಿನ್ಯಾಸಗಳೂ ಕೂಡಾ ಎಲ್ಲವೂ ಅಲ್ಲಲ್ಲಿ ಸೂಕ್ಷ್ಮವಾಗಿ ವೇದಗಳಲ್ಲಿ ಉದಾಹರಿಸಿರುತ್ತದೆ. ಅಲ್ಲಿ ಮುಖ್ಯವಾಗಿ ಕಿರಣ ವಿದಳನ ನಿಯಮ, ನಾದ ಸ್ವರೂಪ, ಸ್ವರ ತರಂಗ, ತರಂಗ ಪರಿಣಾಮ, ಸೂಕ್ಷ್ಮಾತಿಸೂಕ್ಷ್ಮ ತರಂಗ ಶಕ್ತಿ ಮತ್ತು ಕಿರಣ ಪರಿಚಯ, ದಶ ವಿಧ ಕಿರಣಗಳು, ಇವೇ ಅಗ್ನಿಕಲೆಗಳು. ಕಿರಣ, ಪೀತ, ನೀಲ, ತೀಕ್ಷ್ಣ, ಅತಿ ತೀಕ್ಷ್ಣ, ಕ್ರೋಧ, ಕಾಳ, ಕರಾಳ, ಕೃಷ್ಣ, ಕಾಂತ ಎಂಬುದರ ಕಿರಣ ವಿಧಾನವನ್ನು ಕಂಡಿ ಹಿಡಿದಿದ್ದಾರೆ. ಈಗಿನ ಮುಂದುವರೆದ ವಿಜ್ಞಾನವು ಕೂಡಾ ಇದರ ಕೆಲ ಅಂಶ ಗುರುತಿಸಿರಬಹುದು. ಆದರೆ, ಪೂರ್ಣ ಗುರುತಿಸಿದಾಗ ನಿಮಗೆ ಇದರ ಸತ್ಯ ಅರ್ಥವಾಗುವುದು. ಈ ರೀತಿ ನಾದ ಮತ್ತು ಕಿರಣ ವಿಜ್ಞಾನಕ್ಕೆ ಸಂಬಂಧಪಟ್ಟ ಯಂತ್ರಗಳು, ಅವುಗಳಿಗೆ ನಿಯಮಬದ್ಧತೆ ಇರುತ್ತದೆ. ಈ ಮೇಲಿನ ವಿಚಾರ ವಿವರವಾಗಿ ಏಕೆ ಬರೆದೆನೆಂದರೆ ಈಗ ಪ್ರಸಕ್ತ ಪೂಜೆಗೊಳ್ಳುತ್ತಿರುವ ಶ್ರೀಚಕ್ರ ಎಂಬ ಯಂತ್ರದ ಸ್ವರೂಪದ ಬಗ್ಗೆ ನಿಮಗೆ ಸ್ಪಷ್ಟ ತಿಳುವಳಿಕೆ ಬರಲಿ, ಏಕೆಂದರೆ ತಾಂತ್ರಿಕ ನಿಬಂಧನೆಯಾಗಲಿ ಏನಿದೆಯೆಂದರೆ, ಅದು ಮಾಡುವ ಕೆಲಸಕ್ಕೆ ಹೊಂದಿಕೊಂಡು ಬೇರೆ ರೇಖಾ ವಿನ್ಯಾಸವಿರುತ್ತದೆ. ಹಾಗಾಗಿ ಯಾವುದೋ ಒಂದು ರೀತಿಯ ಯಂತ್ರ ಬರೆದು, ಏನೋ ಒಂದು ಬೀಜಾಕ್ಷರ ಸಂಯೋಜಿಸಿದರೆ ಯಾವುದೋ ದೇವತೆಗಳು ಆರೋಪಿಸಿದರೆ ಯಂತ್ರವು ಕೆಲಸ ಮಾಡುವುದಿಲ್ಲ ಅಥವಾ ವಿಪರೀತ ದುಷ್ಪರಿಣಾಮ ಉಂಟು ಮಾಡಬಹುದು. ಬೀಜಾಕ್ಷರ ಸಂಯೋಜನೆ ಎಂದರೆ ಸುಲಭವಲ್ಲ. ಅದೊಂದು ಆಪತ್ಕಾರೀ ಸ್ಫೋಟಕವಾಗಿ ಪರಿಣಮಿಸಬಹುದು, ಮಾರಕವಾಗಬಹುದು, ಅಲ್ಲದೇ ಅದರಿಂದ ಉಂಟಾಗುವ ಪರಿಣಾಮವನ್ನು ಹಲವಾರು ವರ್ಷಗಳ ಕಾಲ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು. ಹಾಗಿದ್ದಾಗ ತಾಂತ್ರಿಕ ಸೂತ್ರ ತಿಳಿಯದೇ ಬೀಜವಾಗಲೀ ಅಥವಾ ಯಂತ್ರವಾಗಲೀ ಬಳಸಬೇಡಿ. ಅಗೋಚರ ಯಂತ್ರವೇನೆಂದು ನಿಮಗೆ ಈಗ ಅರ್ಥವಾಗಿರಬಹುದು.

        ಇನ್ನು ಬೀಜವೆಂದರೇನು ಎಂದು ತಿಳಿಯೋಣ. ಬೀಜವೆಂದರೆ ಒಂದು ಮಂತ್ರದ ಸಾರವೆಂದರ್ಥ. ಯಾವುದೇ ಒಂದು ಮಂತ್ರವನ್ನು ಶಾಸ್ತ್ರೀಯವಾಗಿ ಮಂಥನ ಮಾಡಿದಾಗ ಆ ಮಂತ್ರ ಸಾರ ರೂಪವಾಗಿ ಉದ್ಭವಿಸುವ ಏಕಾಕ್ಷರೀ ಅಥವಾ ಸಂಯುಕ್ತಾಕ್ಷರಿಯೇ ಬೀಜ. ಮಂತ್ರ ಮಂಥನ ವಿಚಾರ ಹಿಂದಿನ ಸಂಚಿಕೆಯಲ್ಲಿ ಪ್ರಕಟಿಸಿದ್ದೇವೆ, ಓದಿರಬಹುದು. ಹಿಂದೆ ಹೇಳಿದ ಷಟ್ ಸೂತ್ರಗಳಲ್ಲಿ ಬೀಜೋತ್ಪಾದನಾ ವಿಧಾನವೂ ಒಂದು, ಅದೇ ಮಂಥನ. ಅದರಿಂದಾಗಿ ಬೀಜ ಉತ್ಪಾದಿಸುತ್ತದೆ. ಹೇಗೆ ಪ್ರಕೃತಿಯಲ್ಲಿ ಇರತಕ್ಕ ಬೀಜವು ಅದರ ಮೂಲದ ಸರ್ವಸಾರವನ್ನು ಹೊಂದಿರುತ್ತದೆಯೋ, ಹಾಗೆಯೇ ಬೀಜವೂ ಕೂಡ ಅದರ ಮೂಲ ಮಂತ್ರದ ಸರ್ವಸಾರವನ್ನು ಹೊಂದಿರುತ್ತದೆ. ಕೆಲ ಉಪಾಸಕರಿಗೆ ಗೊತ್ತಿರಬಹುದು - ಬೀಜ, ಕೀಲಕ, ಅಸ್ತ್ರ ಎಂದು ನ್ಯಾಸದಲ್ಲಿ ಹೇಳುವ ವಿಧಾನವಿದೆ. ಅದರ ಅರ್ಥವೇನು ಚಿಂತಿಸಿದ್ದೀರಾ? ಅಂದರೆ ಬೀಜರೂಪವಾದ ಈ ಮಂತ್ರವನ್ನು (ಕೀಲಕ) ಈ ತಾಂತ್ರಿಕ ಸೂತ್ರದಂತೆ ನಾನು ನನ್ನ ಉದ್ದೇಶ ಸಾಧನೆಗಾಗಿ ಅಸ್ತ್ರವಾಗಿ ಪರಿವರ್ತಿಸುತ್ತಿದ್ದೇನೆ ಎಂದು ಹೇಳುವುದೇ ಆಗಿರುತ್ತದೆ. ಬೀಜವು ಛೇದನ ಅಂದರೆ ಛೇದಿಸಲ್ಪಟ್ಟಾಗ ಅದು ಅಸ್ತ್ರವಾಗುತ್ತದೆ. ಇದು ವೈಜ್ಞಾನಿಕ ಸಿದ್ಧಾಂತ. ನಮ್ಮ ಈಗಿನ ಮುಂದುವರಿದ ವೈಜ್ಞಾನಿಕ ಸಿದ್ಧಾಂತದ ಅಣು ವಿಜ್ಞಾನ ಇದನ್ನೇ ಹೇಳುತ್ತದೆ. ಅಣುವಿನ ಛೇದನದಿಂದ ಮಹಾಶಕ್ತಿ ಉತ್ಪಾದನೆಯಾಗುತ್ತದೆಯೋ ಹಾಗೆಯೇ ಈ ವಿಜ್ಞಾನವೂ ಇದನ್ನೇ ಹೇಳುತ್ತದೆ. ಹಾಗಾಗಿ ಕೇವಲ ಬೀಜಾಕ್ಷರ ತಿಳಿದರೆ ನೀವು ಅದನ್ನು ಬಳಸುವ ಅರ್ಹತೆ ಪಡೆಯುವುದಿಲ್ಲ. ಪೂರ್ವಭಾವಿಯಾಗಿ ಈ ಮಂತ್ರದ ಸಮಗ್ರ ವಿವರ, ಅದರ ಮಂತ್ರ ವಿವರ ತಿಳಿದಿರಬೇಕು. ಅದು ನಿಮಗೆ ಅಧೀನವಾಗಿರಬೇಕು, ಅಂದರೆ ಅದರ ಸ್ಪಷ್ಟತೆ ನಿಮಗಿರಬೇಕು ಎಂದರ್ಥ. ಬರೇ ಬೀಜವನ್ನು ತಿಳಿದು ಪ್ರಾತ್ಯಕ್ಷಿಕವಾಗಿ ಪ್ರಯೋಗಕ್ಕೆ ಬಳಸಿದಲ್ಲಿ ಅದು ಹಿಂದಿನ ಮಹಾಭಾರತ ಕಾಲದ ಅಶ್ವತ್ಥಾಮಾಚಾರ್ಯರ ಉದಾಹರಣೆ ಮರುಕಳಿಸುತ್ತದೆ. ಈಗ ಮರುಕಳಿಸಿದೆ. ನೀವೇ ಸಂಶೋಧಿಸಿದರೆ ತಿಳಿಯುತ್ತದೆ. ಮಂತ್ರದ ದುರುಪಯೋಗದಿಂದ ಏನೇನಾಗುತ್ತಿದೆ ಎಂದು ನಿಮ್ಮಲ್ಲಿ ಕೆಲವರಿಗಾದರೂ ನಿದರ್ಶನವಾಗಿರಬಹುದು. ನಾನೇನೂ ಹೆಚ್ಚಿಗೆ ಹೇಳಲಾರೆ. ಈ ಲೇಖನದ ಉದ್ದೇಶ ಯಂತ್ರ, ಮಂತ್ರ, ತಂತ್ರಗಳನ್ನು ಸಾರ್ಥಕ ಉಪಯೋಗಕ್ಕೆ ಬಳಸಿ ಎಂಬುದಾಗಿರುತ್ತದೆ.

        ಈಗ ನಿಮಗೆ ಯಂತ್ರವೆಂದರೇನು? ಅದರ ರೇಖಾ ವಿನ್ಯಾಸಕ್ಕೆ ಏನು ಅರ್ಥ? ಯಂತ್ರದಲ್ಲಿರತಕ್ಕ ಕೋನಗಳು ಏಕಿರುತ್ತವೆ? ದಳಗಳೆಂದರೇನು? ಅದರಿಂದ ಏನು ಉಪಯೋಗ? ಅದರ ಬಹಿರ್ಭಾಗದಲ್ಲಿ ವೃತ್ತಗಳೇಕಿರುತ್ತವೆ? ಭೂಪುರವೆಂದರೇನು? ಅದರ ರೇಖಾ ವಿನ್ಯಾಸಕ್ಕೆ ಅರ್ಥವಿದೆಯೇ? ಇದೆ. ಅದರ ಬಗ್ಗೆ ವಿವರಣೆಯನ್ನು ಕೊಡುತ್ತೇನೆ, ಆದರೆ ಸೂಚ್ಯವಾಗಿ ಮಾತ್ರ ಕೊಡುತ್ತೇನೆ. ಕೆಲವು ವೇದದ ಉದಾಹರಣೆಯನ್ನು ಕೊಡುತ್ತೇನೆ. ಅದನ್ನು ವಿವರವಾಗಿ ಪ್ರಕಟಿಸಲು ಈ ಲೇಖನ ಉದ್ದವಾಗುತ್ತದೆ. ನೀವೇ ಅರಿತುಕೊಳ್ಳಿ. ಕೋನ ಅಂದರೆ, ಮುಖ್ಯವಾಗಿ ಸಮಾನಾಂತರ ಭುಜವುಳ್ಳ ೨ - ೪ - ೬- ೮ - ೧೨ - ೨೪ - ೩೨ - ೬೪ - ೧೨೮. ಹೀಗೆ ರೇಖೆಗಳ ಸಂಯೋಜನೆಯಿಂದ ಹಲವು ಕೋನಾಕೃತಿಗಳನ್ನು ಮೇಲೆ ಸೂಚಿಸಿದ ತಂತ್ರಶಾಸ್ತ್ರಬದ್ಧವಾಗಿ ರಚಿಸಬಹುದು. ಅಲ್ಲದೆ ಅದು ಸಾರ್ವತ್ರಿಕವಾಗಿ ನಿರಪಾಯಕಾರಿಯಾಗಿ ರಚಿಸಬಹುದು. ಅಲ್ಲದೆ ಅದು ಸಾರ್ವತ್ರಿಕವಾಗಿ ನಿರಪಾಯಕಾರಿಯಾಗಿ ಸಂಯೋಜಿಸಲು ಸಾಧ್ಯ. ಅಲ್ಲದೆ ಬೇರೆ ರೇಖಾ ವಿನ್ಯಾಸದಿಂದಲೂ ಕೆಲ ತ್ರಿಕೋನ ಸಂಯೋಜಿಸಲು ಸಾಧ್ಯ. ಆದರೆ ಅದು ನಿರಪಾಯಕಾರಿಯೆಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಉಂಟಾಗುವ ಕೋನಗಳಿಂದಾಗಿ ಬೆಳಕಿನ ಕಿರಣಗಳು ಹಿಂದೆ ತಿಳಿಸಿದಂತೆ ವಿಪರೀತ ಕಿರಣಗಳಾಗಿ ಪರಿವರ್ತನೆ ಹೊಂದಲು ಸಾಧ್ಯ. ಏಕೆಂದರೆ ಬಿಂದು-ಕಿರಣ, ಅದು ತ್ರಿಕೋಣವಾದರೆ ತೀಕ್ಷ್ಣವೆಂಬ ಕಿರಣ ರೂಪವನ್ನು ಹೊಂದಿ ಬೆಳೆಯಲಾರಂಭಿಸುತ್ತದೆ. ಅದು ಮುಂದೆ ಅದೇ ಅನುಪಾತದಲ್ಲಿ ವೃದ್ಧಿಹೊಂದುತ್ತಾ ಹೋದಲ್ಲಿ ಖಂಡಿತಾ ಅಪಾಯಕಾರಿ.

        ಉದಾಹರಣೆ:- ಭೂತಕನ್ನಡಿ: ಇದು ಎಲ್ಲರಿಗೂ ಚಿರಪರಿಚಿತ ವಸ್ತು. ಇದರ ಮೂಲಕ ಸೂರ್ಯರಶ್ಮಿಗಳನ್ನು ಬಿಂದುರೂಪವಾಗಿ ಒಂದು ವಸ್ತುವಿನ ಮೇಲೆ ಕೇಂದ್ರೀಕೃತಗೊಳಿಸಿದಾಗ ಕಿರಣಗಳು ಆ ವಸ್ತುವಿನ ಮೇಲೆ ವಿಪರೀತ ಪರಿಣಾಮವನ್ನು ಉಂಟು ಮಾಡುತ್ತದೆ (ಸುಡುತ್ತದೆ). ಆದರೆ ಮುಂದಿನ ಸಂಯೋಜನೆಯಲ್ಲಿ ಅದನ್ನು ಅದೇ ದಾಮಾಶಯದಲ್ಲಿ ವೃದ್ಧಿಸುತ್ತಾ ಹೋಗಿ ಬ್ರಹ್ಮಾಂಡದಲ್ಲಿ ಇರತಕ್ಕ ಕಾಂತಕಿರಣದಲ್ಲಿ ಸೇರುವಂತೆ ಸಂಯೋಜಿಸಿದಲ್ಲಿ ನಿರಪಾಯಕಾರಿಯಾಗಿ ಪರಿಣಮಿಸಬಹುದು. ಆದರೆ ಒಂದು ವೇಳೆ ಆದ ವೃದ್ಧಿಗೆ ಪ್ರಚೋದಿಸಿ ಬಿಟ್ಟು ನಂತರ ಅದನ್ನು ಸ್ಥಂಭಿಸುವಮ್ತೆ ಮಾಡಹೋದರೆ ಗ್ಯಾಸ್ ಸಿಲಿಂಡರಿಗೆ ಬೆಂಕಿ ಹೊತ್ತಿಸಿಬಿಟ್ಟು ಅಪ್ಪಿಕೊಂಡಂತೆ ಎಂಬ ವಿಚಾರ ತಿಳಿದಿರಲಿ. ಹಾಗೆ ಹರಿಯುತ್ತಿರುವ ನೀರು ಹಾಗೇ ಹರಿಯುವುದಕ್ಕೆ ಬಿಟ್ಟಲ್ಲಿ ಪ್ರವಾಹ ಬಂದರೂ ಕೂಡ ನಿರೀಕ್ಷಿತವಾದ್ದರಿಂದ ಸುಲಭದಲ್ಲಿ ಪಾರಾಗಬಹುದು. ಆದರೆ ಅಣೆಕಟ್ಟು ಕಟ್ಟಿ, ಕಟ್ಟೆ ತುಂಬಿರುವಾಗ ಒಂದೇ ಸಾರಿಗೆ ಪ್ರವಾಹ ಬಂದು ಕಟ್ಟೆ ಹೊಡೆದಲ್ಲಿ ಅದರ ಪರಿಣಾಮ ಎದುರಿಸಲು ಸಾಧ್ಯವೇ? ಆಲೋಚಿಸಿ. ಆದ್ದರಿಂದ ಕಿರಣ ವಿಜ್ಞಾನ ರೀತ್ಯಾ ಪ್ರಕೃತಿ ಸಹಜ ಕಿರಣಗಳು ಎಲ್ಲವೂ ಕೊನೆಯಲ್ಲಿ ಕಾಂತಕಿರಣದಲ್ಲಿ ವಿಲೀನವಾಗುತ್ತದೆ. ಹಂತ ಹಂತವಾಗಿ, ಆದರೆ ಒಮ್ಮೆ ತಡೆಯಲ್ಪಟ್ಟ ಕಿರಣಗಳು ಪುನಃ ಅದರ ಸೀಮಿತ ವೇಗಕ್ಕೆ ಸಂಯೋಜಿಸುವುದು ಕಷ್ಟ. ಹಾಗಿದ್ದಾಗ ಆಗತಕ್ಕ ಸ್ಫೋಟಕ ನಾಶಕರವಾಗುತ್ತದೆ. ತನ್ನ ಔಪಾಸಕನನ್ನೇ ನಾಶಮಾಡುತ್ತದೆ. ಹಾಗಿದ್ದಾಗ ಆ ಯಂತ್ರದಲ್ಲಿ ಸೂತ್ರಕ್ಕನುಸರಿಸಿ ವೃತ್ತ ಲಕ್ಷಣವನ್ನು ಹೇಳಿರುತ್ತದೆ. ಅದರಂತೆ ತಂತ್ರಶಾಸ್ತ್ರ ರೀತ್ಯಾ ವೃತ್ತಗಳನ್ನು ರಚಿಸಿದಲ್ಲಿ ಆ ಕಿರಣಗಳು ಕಾಂತಕಿರಣಗಳಾಗಿ ಪರಿವರ್ತನೆಯಾಗಲು ಸಾಧ್ಯ. ಕಾಂತಕಿರಣಗಳು ನಿರುಪದ್ರವಿ. ಒಂದು ವೃತ್ತದ ಮಧ್ಯದಲ್ಲಿ ಅಂದರೆ ಕ್ಷೇತ್ರೀಯ ವೃತ್ತದಲ್ಲಿ ವೇಗ ವೃದ್ಧಿಯಾದಲ್ಲಿ ಅಲ್ಲಿ ಕಾಂತ ವ್ಯುತ್ಪತ್ತಿಯಾಗುತ್ತದೆ ಎಂಬುದು ವೈಜ್ಞಾನಿಕ ಸಿದ್ಧಾಂತ. ಎಲ್ಲರಿಗೂ ತಿಳಿದಿರಬಹುದು. ಹಾಗೆಯೇ ಭೂಪುರಗಳೂ ಕೂಡ ಪರಿಣಾಮಕಾರಿಯಾಗಿ ಕಿರಣವನ್ನು ಅಕಸ್ಮಾತ್ ಸ್ಥಂಭಿಸಲ್ಪಟ್ಟಿದ್ದಲ್ಲಿ ಅದರ ಪರಿಣಾಮ ವಿಪರೀತ. ಹಾಗಾಗದಂತೆ ತಡೆಯಲು ಸಹಕಾರಿಯಾಗುತ್ತದೆ. ಹೇಗೆಂದರೆ ಲೋಕಾದರ್ಶ ಮಂತ್ರವಾದ -

ಗೌರೀರ್ಮಿಮಾಯ ಸಲಿಲಾನಿತ್ಯಕ್ಷತ್ಯೇಕಪದೀ ದ್ವಿಪದೀ ಸಾ ಚತುಷ್ಪದೀ |
ಅಷ್ಟಾಪದೀ ನವಪದೀ ಬಭೂವುಷೀ ಸಹಸ್ರಾಕ್ಷರಾ ಪರಮೇ ವ್ಯೋಮನ್ ||

ಈ ಮಂತ್ರ ಬಲ್ಲವರು ಇದನ್ನು ತಿಳಿಯಬಹುದು. ಬಿಂದು ೨ - ೪ - ೮ ಗಳು ವಿಪರೀತವಾದಲ್ಲಿ ಸರ್ವ ಬೀಜ ಮೂಲವಾದಂತಹ ಎಲ್ಲಾ ಶಕ್ತಿಪೂರಕ ಮಂತ್ರಗಳಿಗೂ ಮಾತೃ ಸ್ವರೂಪ ಮಂತ್ರವು ಗೌರಿ ಮಂತ್ರ. ಇದು ಬೀಜ ರೂಪದಲ್ಲಿ ಏನೇ ಆಗಿದ್ದರೂ ಅದು ಮಾರಕ ವಿದಳನವಾಗುವುದಿದ್ದಲ್ಲಿ ಈ ಮಂತ್ರದಿಂದ ಉಪಸಂಹಾರ ಮಾಡಬಹುದು. ಇದರ ಅರ್ಥವೇ ನಾಲ್ಕು ದ್ವಾರ, ಅಷ್ಟದಳಗಳೊಂದಿಗೆ ಯುಕ್ತವಾದ ಭೂಪುರ. ಅದು ತ್ರಿರೇಖಾತ್ಮಕವಾಗಿರಬಹುದು ಅಥವಾ ಏಕ ರೇಖಾತ್ಮಕವಾಗಿರಬಹುದು. ಅದರ ಉದ್ದೇಶವು ಕೋನದಿಂದ ಹೊರಡತಕ್ಕ ರೇಖೆಗಳ ೧-೨-೪-೮ ದಾಮಾಶಯದಂತೆ ಬಂದಾಗ ಅದನ್ನೇ ಬೀಜದ ಉಪಸಂಹಾರ ತಂತ್ರ ರೀತ್ಯಾ ಉಪಸಂಹರಿಸುವುದಾಗಿರುತ್ತದೆ. ಹಾಗಾಗಿಯೇ ಸರ್ವರಕ್ಷಾತ್ಮಕ ಶಕ್ತಿಯಾದ ಆ ಮಂತ್ರ ಅಲ್ಲದೆ ಅದೇ ಹೇಳುವಂತಹ ಅಧಿಷ್ಠಾನ ದೇವತೆ ಗೌರಿ. ಅಂದರೆ ಪರ್ವತೋಪಮಳು, ಸಕಲ ಕಷ್ಟನಿವಾರಕಳು ಎಂದು ತಿಳಿದು ಎಲ್ಲಾ ಮುತ್ತೈದೆಯರಿಗೂ ವಿವಾಹ ಕಾಲದಲ್ಲಿ ತಾಯಿಯಿಂದಲೇ ಮಗಳಿಗೆ ಉಪದೇಶಿಸಲ್ಪಟ್ಟು ಸರ್ವಮಂಗಳೆ, ಸಕಲ ಸೌಭಾಗ್ಯದಾಯಿನಿ ಎಂದು ತಿಳಿಸಿರುತ್ತಾರೆ.ಆದರೆ ಪ್ರಸಕ್ತ ಕಾಲದಲ್ಲಿ ನಿಜ ಮಾತೃ ಸ್ವರೂಪಿಯಾದ ಗೌರಿಯು ತನ್ನ ಆಕರ್ಷಣೆ ಕಳೆದುಕೊಂಡದ್ದಿದ್ದರೆ ಅದು ನಮ್ಮ ನಿಮ್ಮ ದುರಾದೃಷ್ಟ. ಆ ಸ್ಥಾನದಲ್ಲಿ ಬೇರೆ ಮಾರಿ, ಹೆಮ್ಮಾರಿಗಳು ಸೇರಿದ್ದು ದೇಶದ ದೌರ್ಭಾಗ್ಯವಲ್ಲದೆ ಮತ್ತೇನು? ಈಗಿನ ಸುಮಂಗಲಿಯರಿಗೆ ತನ್ನ ತಾಯಿಯೆ ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬಂದ ಮಾತೃ ಸ್ವರೂಪಿ ಗೌರಿಯ ಮೇಲೆ ನಂಬಿಕೆ ಇಲ್ಲ. ವರ್ಷಕ್ಕೊಮ್ಮೆ ಮಾತ್ರಾ ಸಮಾಜಕ್ಕೆ ಹೆದರಿ ಗೌರೀ ಪೂಜೆ ಮಾಡುತ್ತಾರೆ. ಆದರೆ, ಆ ಸ್ಥಾನದಲ್ಲಿ ಬೇರೆ ಮಾರೀ ಸ್ವರೂಪ ದೇವತೆಯನ್ನು ನಿತ್ಯವೂ ಪೂಜಿಸುತ್ತಾರೆ. ಅದರ ಅರ್ಥವೇನು? ತನ್ನ ತಾಯಿಯಲ್ಲಿ ನಂಬಿಕೆಯಿಲ್ಲ, ವಂಶಾಚಾರದಲ್ಲಿ ನಂಬಿಕೆಯಿಲ್ಲದ ಇವರು ನಿತ್ಯವೂ ಬೇರೆ ಯಾವುದೋ ಸಹಸ್ರನಾಮ, ಅಷ್ಟೋತ್ತರ, ಜಪಪೂಜೆ, ಯಂತ್ರಪೂಜೆ ಇವರಿಗೆ ಏಕೆ ಬೇಕು? ತನಗೆ ಜನ್ಮಕೊಟ್ಟ ತಾಯಿಗೇ ನಂಬಿಕೆದ್ರೋಹ ಮಾಡಿದ ಮೇಲೆ ಇವರು ಮಾತೃಸ್ವರೂಪಿ, ಚೈತನ್ಯದಾಯಕೀ ತಾಯಿಯೆಂದು ಭಾವುಕವಾಗಿ ಹೇಳುವ ಲಲಿತಾ ಮೇಲೆ ನಿಮಗೆ ಮಾತೃಭಾವ ಹೇಗೆ ಹುಟ್ಟೀತು? ಖಂಡಿತಾ ಹುಟ್ಟಿಲ್ಲ, ಹುಟ್ಟಿಸಿದೆ. ಏಕೆಂದರೆ ಅದರಲ್ಲಿ ಹೇಳುವ ಆ ಲಲಿತೆಗೆ ಇದೆ ಎಂದು ಆರೋಪಿಸಲಾದ ಉಗ್ರಶಕ್ತಿ. ಅದಕ್ಕಾಗಿ ಭಯದಿಂದ ಹುಟ್ಟಿದ ಭಕ್ತಿ. ಈ ಭಕ್ತಿಯಿಂದ ಏನೂ ಪ್ರಯೋಜನವಿಲ್ಲ. ಭಕ್ತಿಯು ನಿಜವಾಗಿ ಶ್ರದ್ಧೆಯಿಂದ ಹುಟ್ಟಬೇಕೇ ವಿನಃ ಭಯದಿಂದಲ್ಲ. ಭಯದಿಂದ ಹುಟ್ಟಿದ ಭಕ್ತಿಯಿಂದ ಯಾವ ಶಕ್ತಿಯೂ ಒಲಿಯಲಾರದು. ಭಯ ಹುಟ್ಟಿಸುವ ಶಕ್ತಿಗೆ ನಿಜವಾಗಿಯೂ ಶಕ್ತಿಯಿದ್ದಲ್ಲಿ ಅದು ನಿಮ್ಮಿಂದ ಏನೇನೋ ಕಾಣಿಕೆ ಅಪೇಕ್ಷಿಸುತ್ತದೆಯೇ ವಿನಃ, ನಿಮಗೆ ಒಲಿಯಲಾರದು, ನೀವೇ ಆಲೋಚಿಸಿ.

ನಿಮ್ಮ ತಾಯಿ ನಿಮ್ಮನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ನಾನಾ ರೀತಿಯ ಯಾತನೆಯೊಂದಿಗೆ ಧರಿಸಿದಳು. ಯಾವ ಲಾಭಕ್ಕಾಗಿ? ಅತೀವ ನೋವನ್ನು ಅನುಭವಿಸಿದಳು; ಯಾಕಾಗಿ? ನಿಮಗೆ ಹಾಲೂಡಿ ಸಲಹಿದಳು ಯಾಕಾಗಿ? ನಿಮ್ಮ ಸಕಲ ಕಾರ್ಯಗಳಿಗೂ ಮಾರ್ಗದರ್ಶಕಳಾಗಿ, ಗುರುಸ್ವರೂಪಳಾಗಿ ಮುನ್ನಡೆಸಿದಳು, ಏನು ಸಾಫಲ್ಯತೆಗಾಗಿ? ಏನೂ ಇಲ್ಲ, ಯಾವ ಅಪೇಕ್ಷೆಯೂ ಇಲ್ಲ. ಆದರೆ, ತಾಯಿ ಇದಕ್ಕೆಲ್ಲ ನಿಮಗೆ ಕೆಟ್ಟವಳಾದಳೆ? ವೇದವೇ ಹೇಳುತ್ತದೆ -

"ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ"

ಎಂದು. ಹಾಗಿದ್ದರೆ, ನಿಜವಾದ ತಾಯಿ ನಿಮ್ಮಿಂದ ಏನೂ ಅಪೇಕ್ಷಿಸದೆ ನಿಮ್ಮನ್ನು ಸಲಹುವವಳು ಎಂದೇ ಅರ್ಥೈಸಿಕೊಳ್ಳಿ. ಹಾಗಿದ್ದ ಮೇಲೆ ನಿಮ್ಮ ಮಾತೃಪೂಜೆ, ಗೌರವ ಸಲ್ಲಬೇಕಾದ್ದು ಸಹಜವಾಗಿ ತಾಯಿಗೇ ವಿನಃ ಭಯದಿಂದ ಗೌರವಿಸಲ್ಪಡಬೇಕಾದ ಬೇರೆ ತಾಯಿಗಲ್ಲ. ಅದು ತಾಯಿಯಾಗಲು ಸಾಧ್ಯವೂ ಇಲ್ಲ.

        ಇನ್ನು ದಳಗಳ ವಿಚಾರ ತಿಳಿಸುವುದಿದ್ದರೆ ಒಂದು ನಾದ ಸ್ವರೂಪದ ಯಂತ್ರಗಳಲ್ಲಿ ಈ ದಳರೂಪವಾದ ರೇಖಾ ವಿನ್ಯಾಸವಿರುತ್ತದೆ. ಅದು ಒಂದು ಶಬ್ದ ಪ್ರಾಕಾರದ ಮೂಲದಿಂದ ಉತ್ಪನ್ನವಾದರೂ ಕೂಡ ಶಬ್ದವು ಉತ್ಪನ್ನವಾಗತಕ್ಕ ಸ್ಥಾನದಿಂದ ಅರ್ಥ ವ್ಯತ್ಯಾಸವು ಕೇವಲ ಮಾತಿಗೆ ಬಳಸಲ್ಪಡುತ್ತೇವೋ ಹಾಗೇ ದಳಾಕಾರವಾಗಿ ರಚಿಸಲ್ಪಟ್ಟ ಯಂತ್ರದಿಂದ ಶಬ್ದವು ನಾನಾ ತರಂಗ ರೂಪುಗೊಂಡು ನಾದಾನುಸಂಧಾನ ಉಂಟುಮಾಡುತ್ತದೆ. ಅದು ಸೂಕ್ಷ್ಮತರಂಗ ರೂಪವಾದ್ದರಿಂದ ಅದರ ಕೆಲಸವು ಕೇವಲ ಮನಸ್ಸಿನ ಮೇಲೆ ಪರಿಣಾಮ ಮಾಡುವ ಯಂತ್ರಗಳು ಮತ್ತು
  • ಗೌಪ್ಯಸ್ಥಾನ ಭೇದಕ ಯಂತ್ರಗಳು,
  • ಸೂಕ್ಷ್ಮದರ್ಶಕ ಯಂತ್ರಗಳು,
  • ಸ್ಥಾವರ ಯಂತ್ರಗಳು ಮತ್ತು
  • ಮೋಹನ ಯಂತ್ರಗಳು,
  • ಆಕರ್ಷಣ ಯಂತ್ರಗಳು,
  • ಉದ್ದೀಪನ ಯಂತ್ರಗಳು,
  • ಮತಿಭ್ರಮಣ ಯಂತ್ರಗಳು,
  • ಸ್ಥಂಭನ ಯಂತ್ರಗಳು.

ಹೀಗೆ ನಾನಾ ವಿಧದ ನಾದ ಯಂತ್ರಗಳಿವೆ. ಅವುಗಳೆಲ್ಲಾ ದಳ ರೂಪದ ೭ ಮತ್ತು ಅದರ ಅನುಪಾತದಿಂದ ಉಂಟಾಗತಕ್ಕಂತಹಾ ಕೆಲವು ಸಮೀಕರಣಗಳಿಗೆ ಹೊಂದಿಕೊಂಡು ಬೇರೆ ಬೇರೆ ರೀತಿಯ ಸ್ವರೂಪವಿರುತ್ತದೆ. ಹಿಂದೆ ಉದಾಹರಿಸಿದ ೧೦,೦೦೦ ಯಂತ್ರಗಳಲ್ಲಿ ಅಂದಾಜು ೭,೦೦೦ ಯಂತ್ರಗಳು ನಾದಸ್ವರೂಪದವು. ಅದಕ್ಕಾಗಿಯೇ ಶಬ್ದಕ್ಕೆ ವಿಶೇಷ ಪ್ರಾಧಾನ್ಯತೆ ಉಂಟಾಗಿದೆ. ಈಗ ಪ್ರಪಂಚವೆಲ್ಲ ಯಾವುದೋ ಒಂದು ರೀತಿಯ ಶಬ್ದತರಂಗ ಆವರಿಸಿದೆ. ವೇದಕಾಲಕ್ಕೂ ಪೂರ್ವದಲ್ಲಿಯೇ ಓಂಕಾರ ನಾದವೊಂದು ಪ್ರಪಂಚವ್ಯಾಪಿಯಾಗಿದೆ. ಅದೇ ಪ್ರಪಂಚದ ಎಲ್ಲಾ ಸತ್ಯ, ಶಕ್ತಿ, ಚೈತನ್ಯ ಎಂದು ಗುರುತಿಸಿದ್ದರು. ಈಗಲೂ ಮುಂದುವರೆದ ವಿಜ್ಞಾನವು, ಶಬ್ದವು ನಾನಾ ರೀತಿಯ ಕಾರ್ಯಸಾಧ್ಯತೆಗೆ ಉಪಯುಕ್ತವೆಂದು ಕಂಡುಹಿಡಿದಿದ್ದಾರೆ ಎಂಬ ವಿಷಯವು ನಿಮಗೆ ತಿಳಿದಿರಬಹುದು. ಹಾಗೆ ಯಂತ್ರದ ಬಗ್ಗೆ ನಿಮಗೆ ತಿಳಿದಾಗ ಸಾಂಖ್ಯರು ಸಂಖ್ಯಾಶಾಸ್ತ್ರ ರೀತ್ಯ ಶಬ್ದ ಮತ್ತು ಕಿರಣ ವಿಜ್ಞಾನಕ್ಕೆ ಸಂಬಂಧಪಟ್ಟ ಕೆಲ ಸೂತ್ರಗಳನ್ನು ಸ್ವೀಕರಿಸಿದ್ದಾರೆ. ಅದೂ ಕೂಡ ತಂತ್ರಶಾಸ್ತ್ರಕ್ಕೆ ಸಂಬಂಧಪಟ್ಟ ನಿಯಮಕ್ಕೆ ವಿರುದ್ಧವಾಗಿಲ್ಲ. ಹಾಗಿದ್ದ ಮೇಲೆ ಈಗ ನಿಮಗೆ ಅರ್ಥವಾಗಿರಬಹುದು. ತಂತ್ರಶಾಸ್ತ್ರಕ್ಕೆ ವಿರುದ್ಧವಾದ ಯಂತ್ರದಿಂದ ಏನು ಮಾರಕ ಪರಿಣಾಮವಾಗಬಹುದು ಎಂದು. ಶಬ್ದ ಮತ್ತು ಕಿರಣ ಸ್ವರೂಪದ ಯಂತ್ರ ಬಿಟ್ಟರೆ ಅಗೋಚರ ಯಂತ್ರಗಳಲ್ಲಿ ಬೇರೆ ಯಂತ್ರವಿಲ್ಲ. ಶಬ್ದ ವಿಜ್ಞಾನ ಮತ್ತು ಕಿರಣ ವಿಜ್ಞಾನಕ್ಕೆ ಸಂಬಂಧಪಟ್ಟ ಸಂಶೋಧನೆಯಲ್ಲಿ ಮಾತ್ರ ಋಷಿಮುನಿಗಳು ಈಗಿನ ಪ್ರಸಕ್ತ ವಿಜ್ಞಾನಕ್ಕಿಂತ ೧೦೦೦ ಪಟ್ಟು ಮುಂದಿದ್ದಾರೆ. ಶಬವನ್ನು ಬೆಳಕಾಗಿಯೂ, ಬೆಳಕನ್ನು ಶಬ್ದವಾಗಿಯೂ ಪರಿವರ್ತಿಸುವ ವಿಧಾನದ ಸ್ವರೂಪವೇ ಒಂದೇ ಯಂತ್ರದಲ್ಲಿ ಕೋಣಗಳೂ, ದಳಗಳನ್ನು ಸಂಯೋಜಿಸುವುದು. ಅಲ್ಲದೇ, ಅದಕ್ಕೆ ನಿಸ್ತಂತು ಸ್ವರೂಪವೆಂದು ನಿರ್ಣಯಿಸಿ ಅದರ ಸೂತ್ರವನ್ನು -

" ತರಣಿರ್ವಿಶ್ವ ದರ್ಶತೋ ಜ್ಯೋತಿಷ್ಕೃದಸಿ ಸೂರ್ಯ |
ವಿಶ್ವಮಾ ಭಾಸಿ ರೋಚನಮ್ || "

ಎಂಬಲ್ಲಿ ಅಳವಡಿಸಿದ್ದಾರೆ. ಈ ಸೂತ್ರದಿಂದ ಸೌರ ಶಕ್ತಿಯ ಮುಖೇನ ರೋಚಕವಾದ ಪ್ರಕೃತಿಯ ಸೃಷ್ಟಿಯಾಗುತ್ತದೆ ಎಂದರ್ಥ. ಇಂತಹ ಹಲವಾರು ಉದಾಹರಣೆ ಕೊಡಬಹುದು. ಆದರೆ, ನೀವೇ ಅಧ್ಯಯನಶೀಲರಾಗಿ ಹುಡುಕಿಕೊಳ್ಳಿ ಎಂದು ಹಾರೈಸುತ್ತೇನೆ.

(ಸಶೇಷ..)

ಇಂತು ಸಜ್ಜನ ವಿಧೇಯ,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರಚಿಕ್ಕಮಗಳೂರು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

Friday, 13 October 2017

ಶ್ರೀಚಕ್ರ, ಶ್ರೀವಿಧ್ಯೆ - ೩ : ಶ್ರೀವಿಧ್ಯಾ ಮತ್ತು ಚಕ್ರವಿಧ್ಯಾ ಎಂದರೇನು?

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]

ಮುಖ್ಯವಾಗಿ ಶ್ರೀವಿಧ್ಯೆ ಎಂದರೇನು? ಮೊದಲು ಪರಿಚಯ ಮಾಡಿಕೊಳ್ಳೋಣ. ಅಷ್ಟಾಂಗಯೋಗ ಪ್ರಣೀತವಾದ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ) ಯೋಗವಿಧ್ಯಾ ಸ್ವರೂಪವಾದ ಯೋಗ ಅಥವಾ ಚೈತನ್ಯವೇ ಶ್ರೀವಿಧ್ಯೆ. ಚೈತನ್ಯ ಸದಾ ಚೇತನ ಸ್ವರೂಪಿಯಾಗಿರಲು ಪ್ರಪಂಚದ ಸೃಷ್ಠಿ. ಅದೇ ಯೋಗ + ಮಾಯೆ. ಅಂದರೆ, ಯೋಗಮಾಯೆ ಎಂದು ಕರೆದರು. ವೇದಾಂತಿಗಳಿಗೆ ಯೋಗವೂ, ಮಾಯೆಯೂ ಬೇರೆ ಎಂಬ ತಾತ್ವಿಕ ಅರ್ಥವೇ ತಿಳಿಯದೆ ಅದನ್ನೇ ಒಂದು ಎಂದರು. ಯೋಗವೇ ಧರ್ಮ, ಮಾಯೆಯೇ ಕರ್ಮ. ಧರ್ಮ ಕರ್ಮ ಸಂಯೋಗವೇ ಪ್ರಾಪಂಚಿಕ ವ್ಯವಹಾರ, ಪ್ರಪಂಚ ಸೃಷ್ಟಿ. ಸದಾ ಚೈತನ್ಯವು ತನ್ನ ಹೆಸರಿಗೆ ಅನ್ವರ್ಥವಾಗಿರಬೇಕಾದಲ್ಲಿ ಅದು ಚೇತನವನ್ನು ಕಂಡುಕೊಳ್ಳುವುದು ಪ್ರಾಪಂಚಿಕದಲ್ಲಿಯೇ ವಿನಃ ಐಕ್ಯತೆಯಲ್ಲಿ ಅಲ್ಲ. ಆದ್ದರಿಂದ, ಯೋಗಕ್ಕೆ ಬೇಕಾದ ಚೇತನಾವಕಾಶ ಸ್ವರೂಪವಾದ ಪ್ರಪಂಚ. ಅದರಲ್ಲಿ ಸೃಷ್ಟಿ, ಸ್ಥಿತಿ, ಲಯ, ಪುನಃ ಸೃಷ್ಟಿ, ವರ್ತುಲ ಭೇಧಿಸಲ್ಪಡತಕ್ಕದಲ್ಲ ಮತ್ತು ಭೇಧಿಸಲಾಗದ್ದು.

        ಇಲ್ಲಿ ಸೈದ್ಧಾಂತಿಕವಾಗಿ ಹೇಳುವುದಿದ್ದರೆ ಯಾವುದಕ್ಕೂ ನಾಶವಿಲ್ಲ, ಆದರೆ ಯಾವುದರ ಸ್ವರೂಪವೂ ಸ್ಥಿರವಲ್ಲ, ಸದಾ ರೂಪಾಂತರ ಹೊಂದುತ್ತಿರುವ ಪ್ರಕೃತಿಯಲ್ಲಿ ನಾವು ಅಜ್ಞಾನಿಗಳು; ನಾಶವಾಯಿತು ಎಂದು ತಿಳಿಯುತ್ತೇವೆ. ಆದರೆ ಅದರ ಮೂಲವು ಖಂಡಿತಾ ನಾಶವಾಗುವುದಿಲ್ಲ. ತಾತ್ವಿಕ ಸಿದ್ಧಾಂತವನ್ನು ಸಾರಿ ಸಾರಿ ವಿವರಣಾತ್ಮಕವಾದ ರೀತಿ ಹೇಳುವುದೇ ಅದರ ಉದ್ದೇಶವಾಗಿರುತ್ತದೆ. ಸದಾ ಯೋಗವು ಮಾಯೆಯೊಂದಿಗೆ ಸಂಯೋಜಿಸುವುದೇ ಧರ್ಮ ಮತ್ತು ಪ್ರಾಪಂಚಿಕ ನಿಯಮ, ಅದನ್ನು ತಡೆಯುವುದಾಗಲೀ, ತಡೆಯುವ ಪ್ರಯತ್ನ ಮಾಡುವುದಾಗಲೀ  ಜ್ಞಾನಾಕಾಂಕ್ಷಿಗಳ ಕೆಲಸವಲ್ಲ. ಸದಾ ಚೈತನ್ಯವನ್ನು ಗುರುತಿಸುವುದಕ್ಕೂ, ಅದನ್ನೇ ಅರಿಯುವುದಕ್ಕೂ ಪ್ರಯತ್ನಿಸುವುದೇ ಪರಬ್ರಹ್ಮದ ಅನ್ವೇಷಣೆಯ ಮಾರ್ಗ. ಚೈತನ್ಯವು ಅಥವಾ ಯೋಗವು ಯಾವುದರಲ್ಲೋ ಐಕ್ಯವಾದಲ್ಲಿ, ಚೈತನ್ಯರಹಿತ ಸಮಾಜವಿದೆಯೇ? ಹಾಗಿದ್ದಲ್ಲಿ ಚೈತನ್ಯ ಸದಾ ಕಾರ್ಯಪ್ರವೃತ್ತವಾದಾಗಲೇ ಅದನ್ನು ಚೈತನ್ಯ ಎಂದು ಗುರುತಿಸಲು ಸಾಧ್ಯ. ಹಾಗಾಗಿಯೇ ನಿಜವಾದ ದಾರ್ಶನಿಕರು ಪ್ರಪಂಚದ ಅಣುರೇಣು ತೃಣಕಾಷ್ಠದಲ್ಲೂ ಪರಮಾತ್ಮನಿದ್ದಾನೆ, ಸಕಲ ಜೀವಿಗಳೂ ಪರಮಾತ್ಮಸ್ವರೂಪ, ಅದರೊಂದಿಗೆ ಒಂದಾಗಿ ಹೊಂದಿಕೊಳ್ಳುವುದೇ ಮೋಕ್ಷವೆಂದರು. ಪ್ರಕೃತಿ ಸಹಜವಾದ ಎಲ್ಲವನ್ನೂ ಪ್ರೀತಿಸುವ, ಆರಾಧಿಸುವ ಆದರ್ಶವನ್ನೇ ವೇದಗಳು ಸಾರಿ ಹೇಳಿದವೇ ವಿನಃ ಮೇಲು ಕೀಳೆಂಬ ತಾರತಮ್ಯವನ್ನಲ್ಲ!

        "ಕೃಣ್ವಂತೋ ವಿಶ್ವಮಾರ್ಯಂ" ಎಂಬ ಸಿದ್ಧಾಂತ ಆದರ್ಶ ವಾಕ್ಯವನ್ನು ಪ್ರಪಂಚಕ್ಕೆ ಕೊಟ್ಟಿದೆ. ಜ್ಞಾನಸ್ವರೂಪಿಯಾದ ಶ್ರೀವಿಧ್ಯೆ ಅರ್ಥಾತ್ ಜ್ಞಾನ, ಶ್ರೀ = ಜ್ಞಾನ, ವಿಧ್ಯಾ = ವಿವಿಧಾತ್ ಧ್ಯಾಯತೇ ಇತಿ ವಿಧ್ಯಾ = ಎಲ್ಲಾ ತಿಳುವಳಿಕೆಯನ್ನು ಕೊಡುವಂತಹುದೇ "ಶ್ರೀವಿಧ್ಯೆ". ಇಂತಹ ಪ್ರಾಪಂಚಿಕ ಸತ್ಯದರ್ಶಕವಾದ ವಿಧ್ಯೆಯು ಅಲ್ಲದೆ, ಪ್ರಪಂಚದ ಎಲ್ಲಾ ವಸ್ತುವನ್ನು ಕೂಡ ಪ್ರೀತಿಸುವ, ಆರಾಧಿಸುವ ಮಹಾವಿಧ್ಯೆಯ ದ್ಯೋತಕವೇ ಆಗಿದೆ.

        ಆದಿಯಿಂದಲೂ ಬಂದಂತಹ ವೃಕ್ಷ ಪೂಜೆ, ಪ್ರಾಣಪೂಜೆ, ನಾಗಾಧಿಪೂಜೆ, ಶಿಲಾ ಧಾತುಗಳ ಪೂಜೆ, ರತ್ನಾದಿಗಳ ಮಹತ್ವವನ್ನು ಸಾರಿದವು. ಅದನ್ನು ಬಳಕೆಯಲ್ಲಿ ತಂದವರು ಮುರ್ಖರಲ್ಲ. ಈಗ ಮಾತ್ರ ಅವರ ಉದ್ದೇಶಕ್ಕೆ ವಿರುದ್ಧವಾಗಿ ಸತ್ಯ ಮರೆಮಾಚಿ, ಪೂಜಾನಾಟಕ ಆರಂಭವಾಗಿರುವುದರಿಂದ ನಾವು ಮೂರ್ಖರಷ್ಟೇ. ಹಾಗಿದ್ದರೆ, ನಿಜವಾದ ಶ್ರೀವಿಧ್ಯೆಗೆ ಆದಿ ಇದೆಯೇ? ಇಲ್ಲ, ಖಂಡಿತವಾಗಿಯೂ ಇಲ್ಲ. ಇದು ಜ್ಞಾನ, ಹುಟ್ಟಿನಿಂದಲೇ ವಿಧ್ಯೆ ಆರಂಭ. ಮಗುವಿಗೆ ತನಗೆ ಭೂಸ್ಪರ್ಶವಾಗಿದೆ ಎಂಬ ಜ್ಞಾನವಾದಾಗಲೇ ಅಳುತ್ತದೆ. ಅಂದರೆ ಅದಕ್ಕೆ ವಿಧ್ಯೆ ಆರಂಭವಾಯಿತು ಎಂದು ಅರ್ಥ. ಅಂದರೆ, ತಾಯಿಯಿಂದ ಬೇರ್ಪಟ್ಟು ಅಭದ್ರ ಪ್ರಾಕಾರಕ್ಕೆ ತಾನು ಪ್ರವೇಶಿಸಿದ್ದೇನೆ, ತನಗೆ ಭದ್ರತೆಯಿಲ್ಲ ಎಂಬ ತಿಳುವಳಿಕೆಯು ಆರಂಭವಾಯಿತು. ಆದ್ದರಿಂದ ಶ್ರೀವಿಧ್ಯೆಯು ಪ್ರಪಂಚದ ಸೃಷ್ಟಿಯ ಆರಂಭದಲ್ಲೇ ಉದಯವಾಗಿದೆ. ಸೃಷ್ಟಿಗೆ ಆದಿ ಇದೆ ಎಂದಾದರೆ ಶ್ರೀವಿಧ್ಯೆಗೆ ಆದಿ ಇರುವಂತಹದ್ದು. ಸೃಷ್ಟಿಗೆ ಆದಿ ಇಲ್ಲ ಎಂದರೆ ಶ್ರೀವಿಧ್ಯೆಗೂ ಆದಿ ಇಲ್ಲ; ಈ ತಿಳುವಳಿಕೆ ಸಾಕು. ಪ್ರಾಪಂಚಿಕವಾಗಿ ಚೈತನ್ಯದೊಂದಿಗೆ ಕೈಗೂಡಿಸುವುದು ಅಥವಾ ಚೈತನ್ಯವನ್ನು ಅರಿತುಕೊಳ್ಳುವುದೇ ಮೋಕ್ಷ; ಅದೇ ಸಾಧನೆಯ ಉತ್ತುಂಗ. "ನಾನು ಎಂಬುದ ಬಿಟ್ಟು ದೀನನಾದೆನೋ ಹರಿಯೇ" ಎಂಬಂತೆ ನಾನು ಬಿಟ್ಟು ನಾವು, ನಮ್ಮದು ಎಂಬ ವಿಚಾರ ಬೆಳೆಸಿಕೊಂಡಲ್ಲಿ ಮತ್ತು ನನಗಾಗಿ ಎಂಬ ವಿಚಾರವನ್ನು ಮರೆತು ನಮಗಾಗಿ ಅಥವಾ ಸಮಾಜಕ್ಕಾಗಿ, ಸಮಾಜದ ಒಂದು ಅಂಗವಾಗಿ ಬದುಕುವ ಪ್ರತಿಯೊಬ್ಬನೂ ಕೂಡ ಚೈತನ್ಯದ ಪರಿಚಯವನ್ನು ಹೊಂದುತ್ತಾನೆ. ಆದ್ದರಿಂದ ಯೋಗ+ಮಾಯೆ ಒಂದಾದಲ್ಲಿ ಮಾತ್ರ ಪ್ರಪಂಚ ಮುಂದುವರಿಯುತ್ತದೆ. ಅವೆರಡೂ ಒಂದೇ ಎಂದು ತಿಳಿದಲ್ಲಿ ಮೂರ್ಖರಾಗುತ್ತೀರಿ. ಅವೆರಡನ್ನೂ ಬೇರೆ ಬೇರೆಯಾಗಿ ಗುರುತಿಸುವ ದೃಷ್ಟಿಕೋನ ಬೆಳೆಸಿಕೊಳ್ಳಿ. ಮಣ್ಣು ಯೋಗವಾದರೆ, ಅದು ಹೊಂದಿದ ರೂಪ ಮಡಕೆ, ಕುಡಿಕೆ, ಹಣತೆ - ಇದು ಮಾಯೆ. ಆ ರೂಪ ಕಳೆದು ಹೋದಲ್ಲಿ ಪುನಃ ಮಣ್ಣು ಯೋಗವೇ! ಇಷ್ಟಕ್ಕೆ ಶ್ರೀವಿಧ್ಯೆ ಅಂದರೆ ಜ್ಞಾನವಿಧ್ಯೆ, ತಿಳುವಳಿಕೆ ಕೊಡುವಂತಹದ್ದು ಎಂದು ನಿಮಗೆ ಅರ್ಥವಾಗಿರಬಹುದು. ಅದಕ್ಕೆ ಬೇಕಾದ ಮಾರ್ಗ ಅಥವಾ ನೀವು ರೂಢಿಸಿಕೊಳ್ಳಬೇಕಾದ ಅರ್ಹತೆಯೇನು ಎಂದರೆ:-

೧. ಯಮ :- ನಿಮ್ಮಲ್ಲಿರತಕ್ಕ ಕ್ರೋಧಾದಿ ಷಡ್ವೈರಿಗಳನ್ನು ನಿಗ್ರಹಿಸಿಕೊಳ್ಳುವುದು, ನಿರ್ಬಂಧಿಸಿಕೊಳ್ಳುವುದು.

೨. ನಿಯಮ :- ನಿಮ್ಮ ಜೀವನದಲ್ಲಿ ಕುಲಾಚಾರಕ್ಕೆ ಹೊಂದಿದಂತೆ ಧರ್ಮ ಸೂಕ್ಷ್ಮಗಳನ್ನು ಅರಿತು ನ್ಯಾಯಬದ್ಧವಾದ, ಪರಪೀಡೆಯಾಗದಂತಹ ಒಂದು ಗತಿ ರೂಪಿಸಿಕೊಳ್ಳುವುದು.

೩. ಆಸನ:- ನಿಮ್ಮದ್ದಾದ ಕ್ಷೇತ್ರ ಅಂದರೆ ನಿಮ್ಮ ಶಕ್ತಿ ಸಾಮರ್ಥ್ಯದ ಮೇರೆಗೆ ನಿಮಗೊಂದು ಸೀಮೆ ಅಳವಡಿಸಿಕೊಳ್ಳುವುದು. ನಿಮ್ಮ ಕಾರ್ಯಕ್ಷೇತ್ರ ಅಲ್ಲಿಗೆ ಸೀಮಿತಗೊಳಿಸಿಕೊಳ್ಳುವುದು.

೪. ಪ್ರಾಣಾಯಾಮ:- ನೀವು ಉಸಿರಾಡಿದಷ್ಟೇ ಗಾಳಿಯನ್ನು ಹೇಗೆ ಪುನಃ ಹೊರ ಬಿಡುತ್ತೀರೋ ಹಾಗೇ ಪ್ರಕೃತಿಯಿಂದ ನೀವು ಏನು ಬಳಸಿರುತ್ತೀರೋ, ಸಮಾಜದಿಂದ ಏನು ಉಪಯೋಗ ಹೊಂದಿದ್ದೀರೋ, ಅಷ್ಟೇ ನಿಮ್ಮಿಂದ ಸಮಾಜಕ್ಕೆ ಸಮರ್ಪಿಸಲ್ಪಡಬೇಕು. ಪ್ರಕೃತಿಗೆ ಸಲ್ಲಬೇಕು.

        ಈ ನಾಲ್ಕು ಸೂತ್ರಗಳನ್ನು ನೀವು ಅಳವಡಿಸಿಕೊಂಡಲ್ಲಿ ನೀವು ಪ್ರಕೃತಿಯ ಋಣಕ್ಕೆ ಸಿಗದೆ ಪ್ರತ್ಯಾಹಾರಿಯಾಗಿ ನಿಮ್ಮ ಗಮನವು ಚೈತನ್ಯ ಗುರುತಿಸುವ ಏಕಾಗ್ರತೆ ಧ್ಯಾನದತ್ತ ತಿರುಗಿ ಚೈತನ್ಯವನ್ನು ಸ್ವೀಕರಿಸುವ ಶಕ್ತಿಯನ್ನು ಹೊಂದಿ ಧಾರಣ ಮಾಡಿಕೊಳ್ಳುವುದೇ ನಾವು ಸಮಾಧಿ ಸ್ಥಿತಿ ಅಥವಾ ಯಾವುದೇ ಲೋಪವಿಲ್ಲದ ನಿಷ್ಕಲ್ಮಷರಾಗಲು ಸಾಧ್ಯವೆಂಬುದೇ ಈ ಸೂತ್ರಗಳು ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ಜೀವನವು ನಿಮಗಾಗಿ ಮಾತ್ರವಲ್ಲ, ಪರರ ಶ್ರೇಯಸ್ಸಿಗಾಗಿಯೂ ಬದುಕಿರಿ, ಬದುಕುವುದಕ್ಕಾಗಿ ಸಮಾಜದ ಸೌಲಭ್ಯ, ಸೌಕರ್ಯ ಬಳಸಿ. ಅಂದರೆ, ಊಟ ಮಾಡಿ ಸಮಾಜದ ಸೌಕರ್ಯ ಭೋಗ ಭಾಗ್ಯಕ್ಕಾಗಿ ಬದುಕಬೇಡಿ; ಊಟಕ್ಕಾಗಿ ಬದುಕಬೇಡಿ; ಉಪಯುಕ್ತರಾಗಿ ಬದುಕಬೇಕು; ಅದು ಯೋಗಮಾರ್ಗದ ಆದರ್ಶವಾಗಿರುತ್ತದೆ. ಈ ವಿಚಾರವಾಗಿ ಎಷ್ಟೇ ಬರೆದರೂ ಮುಗಿಯಲಾರದು. ದಾರ್ಶನಿಕರು, ದಾಸವರೇಣ್ಯರು, ಯತಿಪುಂಗವರು, ಋಷಿ ಮುನಿಗಳು ಕಂಡುಕೊಂಡ ನಿಷ್ಕಾಮಯೋಗ ಮಾರ್ಗವನ್ನು ನಿಮ್ಮ ಮುಂದಿಡುತ್ತಿದ್ದೇನೆ; ಅದೇ ಜ್ಞಾನ ವಿಧ್ಯೆ ಅಥವಾ ಶ್ರೀವಿಧ್ಯೆ. ಮೂಲಾಧಾರಾದಿ ಷಟ್ಚಕ್ರ ಸ್ಥಾನವನ್ನು ಗುರುತಿಸಿ ಚೈತನ್ಯವನ್ನು ನಿರಂತರವಾಗಿ ಇಡುವ ಉದ್ದೇಶವು ಅದೇ ಆಗಿರುತ್ತದೆ. ಈಗ ಈ ಷಟ್ಚಕ್ರ ವಿಧ್ಯೆ ಅಥವಾ ಯೋಗ ವಿಧ್ಯೆಯ ಬಗ್ಗೆ ಹೇಳುತ್ತೇನೆ.


ಈ ಹಿಂದೆ ಅಷ್ಟಾಂಗ ಯೋಗವಿಧ್ಯೆಯನ್ನು ಅರಿತ ಮಾನವನು ಬ್ರಹ್ಮಾಂಡ ಮಂಡಲವೆಲ್ಲಾ ತಾನು ಎಂದು ಗುರುತಿಸುವ ಪರಿಪೂರ್ಣ ಮನದ ವಿಧ್ಯೆಯ ಆಳ ಅಗಾಧತೆಗೆ ತನ್ನ ಆಳವನ್ನು ಅಳವಡಿಸಿಕೊಂಡು ನಿರೀಕ್ಷಿಸುವುದು ಕಷ್ಟಸಾಧ್ಯವಾಗುತ್ತಿದ್ದುದರಿಂದ ಅದಕ್ಕೊಂದು ಸುಲಭೋಪಾಯವನ್ನು ಕಂಡುಹಿಡಿಯಬೇಕೆಂದು ಪ್ರಯತ್ನಿಸಿದ. ಅದೇ ಈ ಷಟ್ಚಕ್ರ ವಿಧ್ಯೆ. ಬ್ರಹ್ಮಾಂಡ ಎಲ್ಲವೂ ಒಂದರಲ್ಲಿರುವಂತೆ ಕಲ್ಪಿಸಿ ಆ ಉದ್ದೇಶದಿಂದಾಗಿ ಪ್ರಯತ್ನಿಸಿದ ಫಲವಾಗಿ ತನ್ನ ದೇಹವೇ ಅದಕ್ಕೆ ಸೂಕ್ತ ರಂಗಮಂದಿರ ಏಕಾಗಬಾರದು? ತನ್ನ ದೇಹದಲ್ಲೂ ಬ್ರಹ್ಮಾಂಡದ ಸರ್ವವೂ ಅಡಕವಾಗಿರಲೇ ಬೇಕು. ಯೋಗವು ಮಾಯೆಯೊಂದಿಗೆ ಸಂಪರ್ಕಿಸಿದಾಗ ಪ್ರಪಂಚ ಸೃಷ್ಟಿಯಾದರೆ ಮಾಯೆಯಲ್ಲಿ ಯಾವುದೇ ಯೋಗಾಂಶವಿಲ್ಲವೇ? ಇರಲೇ ಬೇಕು. ಅಣುವಿನಿಂದ ಪ್ರಪಂಚವಾದರೆ ಅಣುವಿನ ಸ್ವರೂಪವೇನು? ಅದರ ಬೀಜವೇನು? ಅಣುವೂ ಕೂಡ ಯಾವುದೇ ಒಂದು ಚೈತನ್ಯ ಹೊಂದಿರಲೇಬೇಕಲ್ಲವೆ? ಹಾಗಿ ಚಿಂತಿಸಿದ ಮಾನವನು ತನ್ನ ದೇಹದಲ್ಲಿ ಯೋಗ ಮತ್ತು ಮಾಯೆ ಇದೆ ಎಂದು ಕಂಡುಕೊಂಡ, ಹಾಗೂ ಅದು ಎಲ್ಲಿದೆ? ಎಲ್ಲಿರಬೇಕು? ಅದನ್ನು ಅಲ್ಲಿರುವಂತೆ ಮಾಡುವುದು ಹೇಗೆ? ಈ ವಿಚಾರವಾಗಿ ಚಿಂತಿಸಿದಾಗ ಮಾಯೆಯ ಆವರಣದಲ್ಲಿ ಮರೆಯಾಗಿ ಸುಷುಪ್ತಾವಸ್ತೆಯಲ್ಲಿರುವ ತನ್ನ ಚೈತನ್ಯವನ್ನು ತಾನೇ ಪ್ರಯತ್ನಿಸಿದಲ್ಲಿ ಯೋಗದರ್ಶನ ಸಾಧ್ಯವಿಲ್ಲವೇ? ಸಾಧ್ಯವಿದೆ ಎಂದು ಕಂಡುಹಿಡಿದ, ಅದೇ ಷಟ್ಚಕ್ರ ಸಿದ್ಧಾಂತ. ಅದರಲ್ಲಿ ಮೂಲಾಧಾರವೇ ಆದಿ ಮಾಯಾಸ್ಥಾನ, ಸಹಸ್ರಾರವೇ ಅಂತ್ಯ ಯೋಗಸ್ಥಾನ ಎಂದು ಗುರುತಿಸಲ್ಪಡುವ ಸ್ಥಳ. ಹಾಗಿದ್ದರೆ ಮೂಲಾಧಾರದಲ್ಲಿ ಮಾಯೆಯಿಂದ ಆವರಿಸಲ್ಪಟ್ಟ ಯೋಗ ಅಥವಾ ತನ್ನ ಮೂಲ ಚೈತನ್ಯವನ್ನು ಎಚ್ಚರಿಸುವದು ಹೇಗೆ? ಎಂದು ಚಿಂತಿಸಿದ. ಅದಕ್ಕೆ ಸಂಬಂಧಪಟ್ಟು ಈ ಹಿಂದೆ ಹೇಳಿದ ಅಷ್ಟಾಂಗ ಯೋಗವನ್ನು ತನ್ನ ದೇಹಕ್ಕೆ ಹೊಂದಿಸಿ ಯಮನಿಯಮಾಸನಗಳಿಂದ ಸಿದ್ಧನಾಗಿ ಪ್ರಾಣಾಯಾಮಪೂರ್ವಕ ಕುಂಡಲಿನೀ ಸ್ವರೂಪದ ಚೈತನ್ಯವನ್ನು ಉದ್ದೀಪನಗೊಳಿಸಿ ಸುಷುಮ್ನಾ ನಾಡಿಯ ಮೂಲಕ ಯೋಗವನ್ನು ತಂದು ಸಹಸ್ರಾರದಲ್ಲಿ ನೆಲೆಗೊಳಿಸಬಹುದು ಎಂದು ಕಂಡುಕೊಂಡು ಮತ್ತು ಪರಿಪೂರ್ಣವಾದ ಚೈತನ್ಯವನ್ನು ತಾನು ಪಡೆಯಲು ಸಾಧ್ಯ ಎಂದು ತಿಳಿದ. ಅದೇ ಷಟ್ಚಕ್ರ ಸ್ಥಾನವನ್ನು ಗುರುತಿಸಿ ಅಲ್ಲಲ್ಲಿಗೆ ಬೇರೆ ಬೇರೆ ಹೆಸರಿನಿಂದ ಸ್ಥಾನ ಗುರುತಿಸಿದ. ಅದರಲ್ಲಿ ಕೊನೆಯದಾದ ಸಹಸ್ರಾರ ಚಕ್ರವೇ ಜ್ಞಾನಚಕ್ರ. ಹಾಗಾಗಿ ಜ್ಞಾನದ ಇನ್ನೊಂದು ಸಮಾನ ಪದ "ಶ್ರೀ". ಶ್ರೀ ಶಬ್ದಕ್ಕೆ ಜ್ಞಾನವೆಂದು ಅರ್ಥವಿದೆ, ಹಾಗಾಗಿ ಈ ರೀತಿಯ ಮಾರ್ಗಕ್ಕೆ ಶ್ರೀಚಕ್ರ ಎಂದರು. ಹಾಗಾಗಿ ಶ್ರೀವಿಧ್ಯೆ, ಶ್ರೀಚಕ್ರ ಎರಡೂ ತನ್ನತನವನ್ನು ಪ್ರತ್ಯೇಕವಾಗಿ ಸೂಚಿಸುವ, ಅಲ್ಲದೆ ಶ್ರೀವಿಧ್ಯಾ ಮತ್ತು ಚಕ್ರವಿಧ್ಯಾ ಎಂದು ಪ್ರಾಚೀನ ಗ್ರಂಥಗಳಲ್ಲಿ ಪ್ರತ್ಯೇಕವಾಗಿ ಹೆಸರಿಸಲ್ಪಟ್ಟ ಎರಡು ಪ್ರಾಕಾರಗಳು.

ಮೊದಲನೆಯ ಶ್ರೀವಿಧ್ಯೆಗೆ ಚಕ್ರ ಎಂಬ ಅರ್ಥದಲ್ಲಿ ಹೇಳಿದಿದ್ದರೆ ಅದು ಪ್ರಾಪಂಚಿಕ ಚಕ್ರ. ಸೃಷ್ಟಿ, ಸ್ಥಿತಿ, ಲಯ, ಪುನಃ ಸೃಷ್ಟಿ, ಅದರೊಂದಿಗೆ ನಿರಂತರ ಚೈತನ್ಯದ ಆಟ - ಇದನ್ನು ಸೂಚಿಸುವ ಚಕ್ರ. ಅದಕ್ಕೇ ಆಚಾರ್ಯರು


"ಪುನರಪಿ ಜನನಂ, ಪುನರಪಿ ಮರಣಂ,
ಪುನರಪಿ ಜನನೀ ಜಠರೇ ಶಯನಂ"

ಎಂದರು; ಇದೇ ಚಕ್ರ. ಈ ಚಕ್ರವನ್ನು ಅರ್ಥೈಸಿಕೊಂಡರೆ ಅಲ್ಲಿ ನಿಮ್ಮ ಪಾತ್ರವನ್ನು ನೀವು ಕ್ರಮಬದ್ಧವಾಗಿ ನೆರವೇರಿಸಿದರೆ ನೀವೇ ಪರಿಪೂರ್ಣರು ಎಂದು ಅರ್ಥ. ಅಂದರೆ, ಪ್ರಾಪಂಚಿಕ ಜೀವನ ಕರ್ತವ್ಯಗಳಿಂದ ವಿಮುಖನಾಗಿ ಪಲಾಯನ ಮಾಡಬಾರದು ಎಂದು ಅರ್ಥ. ಪ್ರಾಪಂಚಿಕದಲ್ಲಿಯೇ ತಾವರೆ ಎಲೆಯ ಮೇಲಿನ ನೀರಿನಂತೆ ಪ್ರಾಪಂಚಿಕಕ್ಕೆ ಅಂಟದಂತಿರುವುದೇ ನಿಜವಾದ ಯೋಗಿಯ ಲಕ್ಷಣ. ಇಲ್ಲಿಗೆ ಸತ್ಯವಾದ ಶ್ರೀವಿಧ್ಯಾ ಮತ್ತು ಚಕ್ರವಿಧ್ಯಾ ಸ್ವರೂಪ ತಿಳಿಸಿರುತ್ತೇನೆ. ಇಲ್ಲಿಂದ ಮುಂದೆ ಈಗಿನ ವಿವಾದಗ್ರಸ್ತವಾದ ತತ್ಕಾಲದ ಶ್ರೀಚಕ್ರ ಮತ್ತು ಉಪಾಸನೆ ಮತ್ತು ಯಂತ್ರವಿಚಾರವಾಗಿ ಹೇಳುತ್ತೇನೆ. ಈ ಹಿಂದೆ ಹೇಳಿರುವ ಎಲ್ಲಾ ವಿಚಾರವೂ ಕೂಡ ವೇದಮಾನ್ಯತೆ ಇರುವಂತಹದ್ದು. ಮಾನವನಾಗಿ ಬದುಕಲು ಬೇಕಾದ ಮಾರ್ಗದರ್ಶಕವಾಗಿ ಇರುತ್ತದೆ. ಆದರೆ, ಸಮಕಾಲೀನ ಆಷಾಢಭೂತಿಗಳ ಕೈಗೆ ಸಿಕ್ಕಿದ ನಮ್ಮ ವೇದ ಕಾಲದ ವಿಧ್ಯೆಗೆ ನಾನಾ ಅರ್ಥ ಕಲ್ಪಿಸಿ, ವಿರೂಪಗೊಳಿಸಿ ಕಾಗೆ ಬಂಗಾರವನ್ನೇ ನಿಜವಾದ ಬಂಗಾರ ಎಂದು ಹೇಳುವ ಮಟ್ಟಿಗೆ ಮುಂದುವರೆದಿದೆ. ನಿಜವಾದ ಬಂಗಾರ ಅದೃಶ್ಯವಾಗಿದೆ.

(ಸಶೇಷ..)
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರ ಮೀಮಾಂಸಕರು,

ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)