Sunday, 14 July 2013

ವಸಿಷ್ಠ ಕಾವ್ಯಕಂಠ ಗಣಪತಿ ಮುನಿಗಳು

20ನೇ ಶತಮಾನದ ಮೊದಲ 4 ದಶಕಗಳ ದಿಗ್ಗಜರಲ್ಲಿ ತೆರೆಮರೆಯಲ್ಲಿದ್ದೇ ಮಹತ್ಕಾರ್ಯ ಗೈದವರಿವರು. ಗಣಪತಿ ಮುನಿಗಳು ನವೆಂಬರ್ 17, 1878ರಲ್ಲಿ ಶ್ರೀಯುತ ನರಸಿಂಹ ಶಾಸ್ತ್ರಿ ಹಾಗೂ ಶ್ರೀಮತಿ ನರಸಂಹಾಂಬರವರ 3 ಮಕ್ಕಳಲ್ಲಿ ಎರಡನೇಯವರಾಗಿ ಆಂಧ್ರಪ್ರದೇಶದ ಬೊಬ್ಬಿಲಿಯ ಬಳಿ ಕಲವರಯಾಯಿಯಲ್ಲಿ ಜನಿಸಿದರು. ಇವರ ಜನನಕ್ಕೆ ಒಂದು ವರ್ಷದ ಹಿಂದೆ ತಾಯಿ ನರಸಂಹಾಂಬೆಯು ಆಂಧ್ರದ ಅರಸವಲ್ಲಿಯ ಪ್ರಸಿದ್ಧ ಸೂರ್ಯ ದೇಗುಲ ದರ್ಶನಕ್ಕೆ ಹೋಗಿದ್ದರು. ರಥ ಸಪ್ತಮಿಯ ಪುಣ್ಯ ತಿಥಿಯಂದು ಸೂರ್ಯ ದೇವನಿಗೆ ಪೂಜಾಧಾರಗಳನ್ನು ಸಲ್ಲಿಸಿದರು. ಮರುದಿನ ಬೆಳಗ್ಗಿನ ಜಾವದ ಕನಸಿನಲ್ಲಿ ಅದಿತಿಯ ಸಮ ದಿವ್ಯ ಸೌಂದರ್ಯದಿಂದ ಪ್ರಕಾಶಮಾನವಾದ ದೇವಿಯು ದೇಗುಲದ ಇಕ್ಕೆಲಗಳಿಂದ ಬಂದು ಹೊಳೆವ ಕುಂಭವನ್ನು ಕೈಗಿತ್ತು ಅಂತರ್ಧಾನಳಾದಳು. ಕುಂಭವನ್ನು ಸ್ಪರ್ಷಿಸುತ್ತಲೇ ಆಶ್ಚರ್ಯಕರ ರೀತಿಯಲ್ಲಿ ಜೀವ ಪೂರ್ಣತೆಯನ್ನು ಹೊಂದಿತ್ತೋ ಎಂಬಂತೆ ಅದು ಗಂಡು ಶಿಶುವಾಯಿತು. ಯಾತ್ರೆ ಮುಗಿಸಿ ಬಂದೊಡನೆ ತಾನು ಗರ್ಭವತಿ ಎಂದು ತಿಳಿಯಿತು.

ತಂದೆ ನರಸಿಂಹ ಶಾಸ್ತ್ರಿಗಳಿಗೂ ವಿಶೇಷ ಅನುಭವ ಉಂಟಾಗಿತ್ತು. ಅವರು 1878ರ ನವೆಂಬರ್‍ನಲ್ಲಿ ಕಾಶಿಗೆ ಹೋಗಿದ್ದರು. ಅವರು ಗಣಪತಿಯ ದೇವಸ್ಥಾನದಲ್ಲಿ ಪ್ರಾರ್ಥಿಸುವಾಗ ಮೂರ್ತಿಯಿಂದ ಬಾಲನೋರ್ವನು ಬಂದು ಇವರಲ್ಲಿ ಸೇರಿದ ಅನುಭವವಾಯಿತು. ಅದೇ ಸಂದರ್ಭದಲ್ಲಿ ಪತ್ನಿ ನರಸಂಹಾಂಬೆಯು ತನ್ನ ತವರಿನಲ್ಲಿ ಪುತ್ರ ರತ್ನನನ್ನು ಹೆಡೆದಳು! ಮಾತಾ ಪಿತರಿಗೆ ಇಂತಹಾ ದೈವೀಕ ಕುರುಹು ನೀಡಿ ಶಿಶುವು ಜನಿಸಿತು. ಈತನು ಮಹಾಗಣಪತಿಯ ಅಂಶವೇ ಎಂದರಿಯುತ ತಂದೆಯು ಶಿಶುವಿಗೆ “ಗಣಪತಿ” ಎಂದೇ ನಾಮಕರಣ ಮಾಡಿದರು. ಅನ್ವರ್ಥವೆಂಬಂತೆ ಇವರು ತಮ್ಮ ಆರಾಧ್ಯ ದೇವ ಗಣಪನಲ್ಲಿ ಅಚಲ ಭಕ್ತಿಯನ್ನಿಟ್ಟಿದ್ದರು. ಅವರು ಬರೆದಿರುವ ಉಮಾ ಸಹಸ್ರಮ್ ಇದರಲ್ಲಿ ತಾನು ಗಣಪತಿಯ ಅಂಶ ಸಂಜಾತನೆಂದು ವರ್ಣನೆಯಿದೆ. ಗಣಪೈಕ್ಯತೆಯ ಪರಾಕಾಷ್ಠತೆಯಲ್ಲಿ ತನ್ನೆಲ್ಲ ಕಾರ್ಯಗಳ ಚಾಲನಾ ಚೇತನ ಗಣಪತಿಯೇ ಎನ್ನುತ್ತಿದ್ದರು.

ಸ್ವಗೃಹದಲ್ಲಿಯೇ ಗಣಪತಿಯವರು ತಮ್ಮ ಸಂಪೂರ್ಣ ವಿಧ್ಯಾಭ್ಯಾಸವನ್ನು ಪೂರೈಸಿದರು. ಹಲವು ತಲೆಗಳ ಜ್ಞಾನ ಬೆಸೆದು ಬಂದುದರಿಂದ ತಮ್ಮ ಪೂರ್ವೀಕರಂತೆ ಇವರ ತಂದೆಯವರು ಮಂತ್ರಶಾಸ್ತ್ರ, ಜ್ಯೋತಿಷ ಹಾಗೂ ಆಯುರ್ವೇದಗಳಲ್ಲಿ ಪಾಂಡಿತ್ಯ ಸಾಧಿಸಿದ್ದರು. ಬಾಲ ಗಣಪತಿಯು ಈ ಎಲ್ಲ ವಿಧ್ಯಾಭಾಗವನ್ನು ಸಲಿಲವಾಗಿ ಗ್ರಹಿಸಿದನು. ತನ್ನ ಹತ್ತನೆಯ ವಯಸ್ಸಿನಲ್ಲಿ ಪಂಚಾಗ ಬರೆಯುವಷ್ಟು ತಜ್ಞತೆ ಸಾಧಿಸಿದ್ದ. ವಿಶ್ವಾಮಿತ್ರರಂತಹಾ ಪುರಾಣ ಋಷಿಗಳು, ಧ್ರುವನಂತಹಾ ಭಕ್ತ ಮಹಾಶಯರ ಪ್ರಪಂಚ ನಿರ್ಮಾಣ ಕಥೆಗಳನ್ನು ಕೇಳುತ್ತಾ ತಾನೂ ಅವರಲ್ಲೊಬ್ಬನಾಗಬೇಕೆಂದು ಇಚ್ಛಿಸಿದರು.

ಬಾಲ ಗಣಪನು ಸಾಂಪ್ರದಾಯಿಕ ಕಾವ್ಯಗಳನ್ನು ಅಭ್ಯಸಿಸಿ, ತನ್ನನ್ನು ವ್ಯಾಕರಣ ಹಾಗೂ ಕಾವ್ಯಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿಸಿಕೊಂಡನು. ತಮ್ಮ 12ನೇ ವಯಸ್ಸಿನಲ್ಲಿ ಮಂದಾಕ್ರಾಂತ ಛಂದಸ್ಸಿನಲ್ಲಿ ಭೃಂಗ ಸಂದೇಶವೆಂಬ ಸಂಸ್ಕೃತ ಕಾವ್ಯ ರಚಿಸಿದರು. ವ್ಯಾಸ-ವಾಲ್ಮೀಕಿಗಳ ಕೃತಿಗಳನ್ನು ಆಳದಲ್ಲಿ ಅವಲೋಕಿಸಿದರು. ಸತತ ಮಹಾಭಾರತ ಪಾರಾಯಣ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ ಛಂದಸ್ಸು, ವ್ಯಾಕರಣ, ಕಾವ್ಯ, ಪುರಾಣಗಳಲ್ಲಿ ನಿಷ್ಣಾತರಾದರು. ಇವರು ಮಹಾಕವಿ, ಅಷ್ಟಾವಧಾನಿ, ಹಾಗೂ ಒಳ್ಳೆಯ ಉಪನ್ಯಾಸಕರಾಗಿದ್ದರು. ಹಲವು ಆಗಮ ಶಾಸ್ತ್ರಗಳನ್ನು ಅಭ್ಯಸಿಸಿ ಮಂತ್ರಗಳನ್ನು ಬಲ್ಲವರಾಗಿದ್ದ ಇವರು ಶಿವ ಪಂಚಾಕ್ಷರಿಯ ಸತತ ಜಪಗೈದರು. ಅದರಿಂದ ಹಲವು ಆಧ್ಯಾತ್ಮಿಕ ಅನುಭವಗಳಾದರೂ ಶಿವ ಸಾಕ್ಷಾತ್ಕಾರವಾಗಲಿಲ್ಲವೆಂಬ ಕೊರಗಿತ್ತು. ತಮ್ಮ ದೃಷ್ಟಿಕೋನ, ಚಿಂತನಾ ಶೈಲಿ, ಜ್ಞಾನಚಕ್ಷುಗಳು ವಿಕಸಿಸಿ ಅನುಭವಗಳ ಔನ್ನತ್ಯಕ್ಕೇರಿದರು. ಪೂರ್ವೀಕರಂತೆ ಜಪ ತಪೋನುಷ್ಠಾನಗಳಿಂದ ವಿಧ್ಯಾಬಲವನ್ನು ಸಾಧಿಸಲು ತೊಡಗಿದರು.

ಆ ಕಾಲದ ಸಮಾಜ ಧರ್ಮದಂತೆ ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು. ತಮ್ಮ 18ನೇ ವಯಸ್ಸಿನಲ್ಲಿ ಮಾತ ಪಿತರ ಅನುಮತಿ ಪಡೆದು ದೇಶ ಪರ್ಯಟನೆಗೆ ಹೊರಟು ಹಲವು ಪ್ರದೇಶಗಳನ್ನು ಸುತ್ತಿದರು. ಗಂಗಾ, ನರ್ಮದಾ, ಗೋದಾವರಿಗಳಲ್ಲಿ ಜಪ ಆಚರಿಸಿದರು. ಅಲ್ಲಲ್ಲಿ ಸಿಕ್ಕ ಸಜ್ಜನರು, ಸಾಧು-ಸಂತರು, ಋಷಿ-ಮುನಿಗಳಲ್ಲಿ ಅಧ್ಯಯನ, ಚರ್ಚೆಗಳು, ಅನುಷ್ಠಾನಗಳನ್ನು ನೆರವೇರಿಸಿದರು. ನಾಸಿಕ್‍ನಲ್ಲಿ ಅರ್ಚಕನು ಕಳ್ಳತನದ ವೃತಾರೋಪವನ್ನು ಇವರ ಮೇಲೆ ಆರೋಪಿಸಿ ಜನರಿಂದ ಥಳಿಸುವಂತೆ ಮಾಡಿದರು. ಕುಪಿತರಾದ ಮುನಿಯು ತನಗಾದ ಭೌತಿಕ ಘಾತವು ನಾಸಿಕ್‍ನ ಜನರಿಗೂ ಉಂಟಾಗುತ್ತದೆ ಎಂದು ಶಪಿಸಿದರಂತೆ. ಒಂದು ತಿಂಗಳಲ್ಲೇ ಅಲ್ಲಿಗೆ ಚಂಡಮಾರುತ ಅಪ್ಪಳಿಸಿ ಜನರು ತತ್ತರಿಸಿದರು. ಎಷ್ಟೇ ಮಂತ್ರಬಲ ಹೊಂದಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಬಳಸಲಿಲ್ಲ. ಭುವನೇಶ್ವರದಲ್ಲಿ ತಪಸ್ಸನ್ನು ಆಚರಿಸಿದರು. ಅಲ್ಲಿ ಒಂದಿನ ಸ್ವಪ್ನದಲ್ಲಿ ಓರ್ವ ಮಾತೆಯು “ಜಿಹ್ವಯಾಗ್ರೇ ಮಧು ಮೇ ಜಿಹ್ವಾ ಮೂಲೇ ಮಧೂಲಕಮ್” ಎಂಬ ಅಥರ್ವದ ಸೂತ್ರದಂತೆ ಬಾಯಿಗೆ ಹಾಗೂ ಗಂಟಲಿಗೆ ಜೇನುತುಪ್ಪ ಹಾಕಿ ಮಾಯವಾದರು. ಮುಂದೆ ತನ್ನ ಶಿಷ್ಯರೊಂದಿಗೆ ಚರ್ಚಿಸುವಾಗ ತಾನು ಈ ಘಟನೆಯ ನಂತರವೇ ಕಾವ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದಿದ್ದಾರೆ.

ಗಣಪತಿಗಳು ಕಾಶಿಯಲ್ಲಿ ನೆಲೆಸಿದ್ದಾಗ ಬಂಗಾಳದ ನವದ್ವೀಪದ ನಗರದಲ್ಲಿ ಬೃಹತ್ತರವಾದ ಸಂಸ್ಕೃತ ವಿದ್ವಾಂಸರ ಸಮ್ಮೇಳನ ಏರ್ಪಟ್ಟಿತ್ತು. ತನ್ನ ಸ್ನೇಹಿತರ ಮಾತಿನಂತೆ ತನ್ನ ಪರಿಚಯಾತ್ಮಕ ಪತ್ರದೊಂದಿಗೆ ನವದ್ವೀಪಕ್ಕೆ ಹೊರಟರು. ಕಬ್ಬಿಣದ ಕಡಲೆಯ ಹಾಗಿದ್ದ ಸಂಸ್ಕೃತ ಪದ್ಯ ಹಾಗೂ ಗದ್ಯ ಆಧರಿತ ಪರೀಕ್ಷೆಗಳನ್ನು ಸುಲಭವಾಗಿ ಅತ್ಯುತ್ತಮವಾಗಿ ಉತ್ತೀರ್ಣ ಗೈದು ಪರೀಕ್ಷಕರನ್ನು ದಂಗುಗೊಳಿಸಿದರು. ಅದರಿಂದ “ಕಾವ್ಯಕಂಠ” ಎಂಬ ಬಿರುದನ್ನೂ ಪಡೆದರು. ಆಗ ಅವರ ವಯಸ್ಸು 22.

ಗಣಪತಿಯವರು ತಮ್ಮ 25ನೇ ವಯಸ್ಸಿಗೆ ದಕ್ಷಿಣ ಭಾರತಕ್ಕೆ ಹಿಂತಿರುಗಿದರು. 1903ರಲ್ಲಿ ಕಾಂಚೀಪುರದಿಂದ ಅರುಣಾಚಲಕ್ಕೆ (ತಿರುವಣ್ಣಮಲೈಗೆ) ಬಂದು ತಪೋ ನಿರತರಾದರು. ಆ ಸಮಯದಲ್ಲಿ ಬೆಟ್ಟದಲ್ಲಿದ್ದ ರಮಣ ಮಹರ್ಷಿಗಳನ್ನು ಕಂಡರು. 1904ರಲ್ಲಿ ವೆಲ್ಲೋರ್ನಲ್ಲಿ ಅಧ್ಯಾಪಕರಾಗಿ ಸೇರಿದರು. ತನ್ನ ನಿರ್ವಹಣಾ ಸಾಮಥ್ರ್ಯ ಹಾಗೂ ಆಕರ್ಷಕ ವ್ಯಕ್ತಿತ್ವದಿಂದ ಒಳ್ಳೆಯ ಶಿಷ್ಯವರ್ಗವನ್ನು ಪಡೆದರು. ಅವರೆಲ್ಲ ತಮ್ಮ ಮಂತ್ರಬಲದಿಂದ, ಆಧ್ಯಾತ್ಮಿಕ ಶಕ್ತಿಯಿಂದ ರಾಷ್ಟ್ರದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಸ್ವಾತ್ಮೋದ್ಧಾರಕ್ಕೆ ಮೊದಲು ಸಮಾಜೋದ್ಧಾರವಾಗಬೇಕೆಂದ ದೃಢ ಇಚ್ಛಾ ಶಕ್ತಿಯೇ ಇವರ ಧ್ಯೇಯವಾಗಿತ್ತು. 1907ರಲ್ಲಿ ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಅರುಣಾಚಲಕ್ಕೆ ಹಿಂತಿರುಗಿದರು. ಆಗ ರಮಣ ಮಹರ್ಷಿಗಳ ಕೃಪೆಗೂ ಪಾತ್ರರಾದರು.

ಬೌದ್ಧಿಕ, ಆಧ್ಯಾತ್ಮಿಕವಾಗಿ ಉನ್ನತಿಯನ್ನು ಸಾಧಿಸಿದ್ದರೂ ತಮ್ಮ ಜೀವನೋದ್ದೇಶವನ್ನು ಫಲಪ್ರದ ಮಾಡಲಿಲ್ಲ ಎಂಬ ಕೊರಗಿತ್ತು. ಆಗ ರಮಣ ಮಹರ್ಷಿಗಳನ್ನು ಕಂಡು ಉಪದೇಶಕ್ಕಾಗಿ ಪ್ರಾರ್ಥಿಸಿದರು. ಗಣಪತಿ ಮುನಿಗಳು 1907 ನವೆಂಬರ್ 19ಕ್ಕೆ ರಮಣ ಮಹರ್ಷಿಗಳಿದ್ದ ವಿರೂಪಾಕ್ಷ ಗುಹೆಗೆ ಬಂದರು. ಮಹರ್ಷಿಗಳ ಮುಂದೆ ವಿನೀತರಾಗಿ, “ಓದಬೇಕಾದ್ದೆಲ್ಲ ಓದಿದೆ. ವೇದಾಂತ ಶಾಸ್ತ್ರವನ್ನು ಸಂಪೂರ್ಣವಾಗಿ ಅರಿತೆ. ನನ್ನ ಹೃದಯಕ್ಕೆ ಮುಟ್ಟುವಷ್ಟು ಜಪ ಮಾಡಿದ್ದೇನೆ, ಆದರೆ ಇಲ್ಲಿಯವರೆಗೆ ತಪಸ್ಸು ಎಂದರೇನೆಂದು ಅರ್ಥವಾಗಿಲ್ಲ. ಹಾಗಾಗಿ ನಿಮ್ಮ ಪದಕಮಲಗಳಲ್ಲಿ ಶಿರೋಭಾಗಿ ತಪಸ್ಸಿನ ಗುಣ-ಸ್ವಭಾವಗಳನ್ನು ತಿಳಿಸಿಕೊಡಿ” ಎಂದು ಪ್ರಾರ್ಥಿಸಿದರು.

15 ನಿಮಿಷ ರಮಣರು ಮುನಿಗಳನ್ನು ದಿಟ್ಟಿಸಿ ನೋಡಿ ಹೀಗೆ ಉದ್ಗರಿಸಿದರು: “ನಾನು ಎಂಬುದನ್ನು ಸತತ ಗಮನಿಸುತ್ತಿದ್ದರೆ, ಮನಸ್ಸು ಅದರಲ್ಲೇ ವಿಲೀನವಾಗುತ್ತದೆ. ಅದೇ ತಪಸ್ಸು. ಒಂದು ಮಂತ್ರವನ್ನೇ ಸತತ ಜಪಿಸುತ್ತ ಅದರಲ್ಲೇ ತನ್ಮಯನಾಗುತ್ತಾ ಮಂತ್ರ ತರಂಗದ ಮೂಲವನ್ನು ಅನ್ವೇಷಿಸುತ್ತಾ ಮುಂದೆ ಸಾಗುತಿರೆ ಮನವದರಲ್ಲಿ ಲೀನವಾಗುತ್ತದೆ. ಅದೇ ತಪಸ್ಸು, ಎಂದರು. ಈ ಶಬ್ದಗಳನ್ನು ಕೇಳುತ್ತಲೇ ಮುನಿಯು ಆನಂದ ಪೂರಿತನಾಗಿ ಈ ಉಪದೇಶವು ಸಂಪೂರ್ಣವಾಗಿ ಸತ್ಯವೇ ಆಗಿದೆ ಎಂದು ಬ್ರಾಹ್ಮಣಸ್ವಾಮಿ ಎಂಬ ರಮಣರನ್ನು ಮಹರ್ಷಿ ಎಂದು ಸಂಬೋಧಿಸಿದರು. ನಂತರ ವೆಂಕಟರಮಣ ಎಂಬ ನಿಜನಾಮವುಳ್ಳ ಬ್ರಹ್ಮಣಸ್ವಾಮಿಗಳಿಗೆ ಭಗವಾನ್ ಶ್ರೀ ರಮಣ ಮಹರ್ಷಿ ಎಂಬ ಹೆಸರಿಂದ ಕರೆದರು.

ನವೆಂಬರ್ 18, 1907ರಲ್ಲಿ ರಮಣ ಮಹರ್ಷಿಗಳನ್ನು ತಮ್ಮ ಗುರುವೆಂದು ಒಪ್ಪಿದ ಮೇಲೆ ಗಣಪತಿ ಮುನಿಗಳು “ಉಮಾ ಸಹಸ್ರಮ್” ಎಂಬ ಉಮೆಯ ಸಹಸ್ರನಾಮವುಳ್ಳ ಬೃಹತ್ ಭಕ್ತಿ ಗ್ರಂಥ ರಚಿಸಿದರು. ಇವರು ಹೆಸರಿಗಾಗಿ ಕೃತಿ ರಚಿಸಿದವರಲ್ಲ. ಅವರು ತಮ್ಮ ತಪೋಬಲದಿಂದ ಉದ್ಘರಿಸಿದ ವಾಕ್ಯಗಳವು. ಈ ಗ್ರಂಥವು ತನ್ನ ಅಧಿಷ್ಠಾನ ದೇವತೆ ಉಮಾ ಪರಮೇಶ್ವರಿಯು ತನ್ನ ಗುರುವಿನಂತೆ ತನಗೂ ಮಹರ್ಷಿ ಪಟ್ಟ ಕೊಟ್ಟ ಸಂದರ್ಭದಲ್ಲಿ ಮಾಡಿದ ಗುಣಗಾನವಾಗಿದೆ.

ಗಣಪತಿ ಮುನಿಗಳು ಸತ್ಯ-ಧರ್ಮಗಳನ್ನೆತ್ತಿ ಹಿಡಿದ ವೀರ ಸನ್ಯಾಸಿ. ದಿವ್ಯ ಶಕ್ತಿಯೊಂದಿಗೆ ಸತತ ಸಂಪರ್ಕದಲ್ಲಿರಲು ಬೇಕಾದ ಮನೋಬಲವು, ಬೌದ್ಧಿಕಬಲ, ಆತ್ಮಿಕಬಲಗಳನ್ನು ಪಡೆದು ಬಂದವರಾಗಿದ್ದರು. ಇಂದಿಗೂ ಮಹಾನ್ ಪಂಡಿತರು ನಿಬ್ಬೆರಗಾಗುವ ಧೀಮಂತ ವ್ಯಕ್ತಿತ್ವವದು. ಶಾಲೆಯಲ್ಲಿ ಕಲಿಯದ ಕಾರಣ ಕೃತಕತೆ ಇಲ್ಲದೆ ಸಹಜವಾದ ದೈನಂದಿನ ಸಮಸ್ಯೆಗಳನ್ನು ಗುರುತಿಸುವುದರಲ್ಲಿ, ಅದನ್ನು ಪರಿಹರಿಸುವುದರಲ್ಲಿ ಶಕ್ಯರಾಗಿದ್ದರು. ಶಾಸ್ತ್ರಗಳ ಆಳವಾದ ಜ್ಞಾನ, ಅವಿಚ್ಛಿನ್ನ ಜ್ಞಾಪಕ ಶಕ್ತಿ, ಮುಖದಲ್ಲಿನ ದಿವ್ಯ ತೇಜಸ್ಸು ಅವರ ವೈಖರಿ ಹಾಗೂ ಲೇಖನಿಯಿಂದ ಪ್ರಕಾಶಗೊಳ್ಳುತ್ತಿತ್ತು. ಭೂಸುರರೆಂಬ ಖ್ಯಾತಿ ಹೊಂದಿದ್ದ ಋಗ್ವೇದ ಋಷಿಗಳಂತೆ ತತ್ಕಾಲೀನ ಪ್ರಾಪಂಚಿಕ ಹಾಗೂ ಆಧ್ಯಾತ್ಮಿಕ ನಾಯಕರಾಗಿ ಕಂಗೊಳಿಸಿದರು.

ವೇದ ಋಷಿಗಳು ಎಂದೂ ಪ್ರಪಂಚದಿಂದ ವಿಮುಖರಾಗುವುದಿಲ್ಲ. ತಮ್ಮನ್ನು ಸತತ ಚಲಿಸುವ ಪರಿಕರವನ್ನಾಗಿಸಿಕೊಂಡು ಮೂಲ ಚೈತನ್ಯದ ಸಂಪರ್ಕ ಸೇತುಗಳಾಗಿ ಪ್ರಪಂಚ ಕಲ್ಯಾಣಕ್ಕೆ ಶ್ರಮಿಸುವರು. ಮಹಾಶಕ್ತಿಯ ಕರಕಮಲ ಸಂಜಾತನಾಗುವತ್ತ ಗಣಪತಿ ಮುನಿಯು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟರು.

ಒಬ್ಬ ಮಹಾನ್ ಸಾಧಕನಾಗಿದ್ದರೂ ಶಮ-ದಮಾದಿಗಳನ್ನು ರೂಢಿಸಿಕೊಂಡು ವಸಿಷ್ಠರಂತೆ ದೈನ್ಯರಾಗಿದ್ದರು. ಅದಕ್ಕೆ 2 ದೃಷ್ಟಾಂಟ ನೋಡೋಣ. 1917ರಲ್ಲಿ ಮುನಿಗಳು ಹಾಗೂ ಅವರ ಶಿಷ್ಯ ದೈವರಾತರು ವೆಲ್ಲೋರ್‍ನ ಹತ್ತಿರ ಪಡೈವೇಡುವಿನಲ್ಲಿ ತಪಸ್ಸನ್ನಾಚರಿಸಿದರು. ಈ ತಪಸ್ಸಿನ ಫಲವಾಗಿ ಶಿಷ್ಯ ದೈವರಾತರಿಗೆ ಕೆಲ ಮಂತ್ರಗಳ ದರ್ಶನವಾಯಿತು. ಶಂಕರರು ತನ್ನ ಶಿಷ್ಯ ಹಸ್ತಮಲಕನ ಶ್ಲೋಕಗಳಿಗೆ ಭಾಷ್ಯ ಬರೆದ ಹಾಗೆ ಗಣಪತಿ ಮುನಿಗಳು ದೈವರಾತರ ಮಂತ್ರಗಳಿಗೆ “ವಾಸಿಷ್ಠಮನ್ವಯಭಾಷ್ಯ” ಬರೆದರು. ದೈವರಾತ ಮುನಿಗಳೂ ಎಲ್ಲರೊಂದಿಗೆ ಪ್ರೀತಿ ಸೌಹಾರ್ದತೆಯಿಂದ ವರ್ತಿಸುತ್ತಿದ್ದರು. ಆದರೆ ಕೆಲವು ಭಾರಿ ಗುರು ಶಿಷ್ಯರಲ್ಲಿ ವೈಚಾರಿಕ ವಿರೋಧಾಭಾಸಗಳು ಉಂಟಾಗುತ್ತಿತ್ತು. ಗಣಪತಿ ಮುನಿಗಳ ವಿಶಾಲ ದೃಷ್ಠಿಕೋನ ಹಾಗೂ ಪ್ರೀತಿಯು ಯಾವುದೇ ವೈಮನಸ್ಯವನ್ನುಂಟು ಮಾಡದೆ ಏಕತೆಯತ್ತಲೇ ಎಲ್ಲರನ್ನು ಕೊಂಡೊಯ್ಯುತ್ತಿದ್ದರು. ಕಪಾಲಿ ಶಾಸ್ತ್ರಿಯವರು ಶ್ರೀ ಅರಬಿಂದರ ಶಿಷ್ಯನಾಗಿ ಸೇರಲು ಅನುಮತಿ ಕೇಳಿದಾಗ ಆಶೀರ್ವದಿಸಿದರು. ಗಣಪತಿ ಮುನಿಗಳು ಆಗಸ್ಟ್ 15, 1928ರಲ್ಲಿ ಶ್ರೀ ಅರಬಿಂದರನ್ನು ಭೇಟಿಯಾದರು.

ಗಣಪತಿ ಮುನಿಗಳು ಓರ್ವ ದಿಟ್ಟ ತಪಸ್ವಿಯಾಗಿದ್ದರು. ಅವರು ಭಾರತ ಮಾತೆಯನ್ನು ತನ್ನ ಪೂರ್ವ ವೈಧಿಕ ವೈಭವಕ್ಕೆ ಕೊಂಡೊಯ್ಯಬೇಕೆಂಬ ಕನಸು ಕಂಡವರು. ಬೇರೆಯವರಂತೆ ಸ್ವಾತ್ಮೋದ್ಧಾರ ಪ್ರಯತ್ನ ಮಾಡದೆ, ತನ್ನ ಇಷ್ಟ ದೇವರ ಕೃಪೆ ಪಡೆದು ರಾಷ್ಟ್ರಕ್ಷೇಮಕ್ಕೆ ಶ್ರಮಿಸಿ ತನ್ಮೂಲಕ ಪ್ರಪಂಚ ಕ್ಷೇಮವನ್ನು ಸಾಧಿಸಬೇಕೆಂಬ ಗುರಿ ಹೊಂದಿದ್ದವರು. ಅದನ್ನು ನೆರವೇರಿಸುವ ದಾರಿಯಲ್ಲೇ ಬಾಲ್ಯದಿಂದ ವೃದ್ಧಾಪ್ಯದವರೆಗೂ ನಡೆದರು. 25-07-1906ರಲ್ಲಿ 58 ವಯಸ್ಸು, ಪಶ್ಚಿಮ ಬಂಗಾಳದ ಖರಗ್ಪುರದಲ್ಲಿ ಸ್ವರ್ಗಸ್ಥರಾದರು. ಆ ಕಾಲದಲ್ಲಿ ಕಪಾಲಭೇದದಿಂದ ಪ್ರಾಣ ತ್ಯಜಿಸಿದವರು ಎಂದು ನೋಡಿದವರು ಹೇಳಿದ್ದಾರೆ.

ಇವರ ಕೃತಿಗಳು:- ಉಮಾಸಹಸ್ರಮ್, ವೇದದ 7 ಛಂದಸ್ಸುಗಳಿಂದ ವಿರಚಿತ ಇಂದ್ರಾಣೀ ಸಪ್ತಶತೀ, ಉಮಾಶತಕಮ್, ಶಿವಶತಕಮ್, ಉಮಾತ್ರಿಶತೀ, ವೇದಗಳಲ್ಲಿ ಕಂಡುಬರುವ ಇಂದ್ರನ ಹೆಸರುಗಳನ್ನು ಸಂಗ್ರಹಿಸಿ ವಿಶೇಷ ಶಕ್ತಿ ತುಂಬಿ ರಚಿಸಿದ ಇಂದ್ರ ಸಹಸ್ರನಾಮವು ವೇದಾಭ್ಯಾಸಿಗಳಿಗೆ ಪೂರಕಬಲವಾಗಿದೆ. ವೇದ ದೇವತೆಗಳಾದ ಅಗ್ನಿ, ಇಂದ್ರ, ವಾಯು, ಚಂದ್ರ, ಸೂರ್ಯಾದಿಗಳ ಸ್ತ್ರೋತ್ರವುಳ್ಳ ಗೀತಾಮಾಲ, ರಮಣ ಚತ್ವಾರಿಂಶತ್, ಹೇರಂಭೋಪಸ್ಥಾನಮ್. ಈಶ್ವರ, ಶಕ್ತಿ, ದೇವಾನುದೇವತೆಗಳು, ಆತ್ಮ, ಪರಮಾತ್ಮ, ಉಪನಿಷತ್ತುಗಳಲ್ಲಿ ಉಲ್ಲೇಖವಾದ ದೇವಾನುಸಂಧಾನ, ಸ್ವರ್ಗಾದಿ ಲೋಕಗಳು, ಜೀವನ್ಮುಕ್ತಿಗಳನ್ನು ಚಿಂತಿಸುವ ವಿಶ್ವಮೀಮಾಂಸ ಎಂಬ ಕೃತಿ. ಉಡುಪಿಯ ಹತ್ತಿರ ನಡೆದ ಅಷ್ಟಾವಧಾನದಲ್ಲಿ ಬಂದ 100 ಶ್ಲೋಕಗಳ ಆಧಿಭೌತಿಕ ವಿಚಾರಗಳುಳ್ಳ ತತ್ವಜ್ಞತಾಶತಕಮ್. ತಾಂತ್ರಿಕ ದಶಮಹಾವಿಧ್ಯೆಗಳ ವಿವರವುಳ್ಳ ಮಹಾವಿಧ್ಯಾಸೂತ್ರಮ್, ರಾಜಯೋಗಸಾರಸೂತ್ರಮ್, ರಮಣಗೀತಾ, ವೇದ ಮೂಲವನ್ನು ನಿಷ್ರ್ಕರ್ಷಿಸುವ ಶಬ್ದಪ್ರಮಾಣಾಚಾರ, ಅಸ್ಪೃಷ್ಯತೆ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ಖಂಡಿಸುವ ಪಂಚಜನಾಚಾರ, ವಿವಾಹಧರ್ಮ ಸೂತ್ರಮ್, ಈಶೋಪನಿಷತ್ ಭಾಷ್ಯ, ರಮಣರ ಉಪದೇಶಸಾರ ಭಾಷ್ಯ, ವೈದ್ಯಶಾಸ್ತ್ರಗ್ರಂಥವಾದ ಚಿಕಿತ್ಸಾನುಶಾಸನಮ್, ಆಯುರ್ವೇದ ಸಂಗ್ರಹ ಹಾಗೂ ಪ್ರಾಣತೋಷಣಮ್. ಜ್ಯೋತಿಷ ಗ್ರಂಥಗಳಾದ ಷೋಡಶಶ್ಲೋಕೀ, ಹೋರಾನಿರ್ಣಯ ಸಂಗ್ರಹ, ತ್ರಿಭಾವಫಲಚಂದ್ರಿಕಾ. ತೆಲುಗಿನಲ್ಲಿ ಇಂದ್ರಗೀತಮು. ಇದಲ್ಲದೆ ಇನ್ನು ಕೆಲವು ಕೃತಿಗಳು ಅಪೂರ್ಣವಾಗಿವೆ. ಅದರಲ್ಲಿ ಪೂರ್ಣ ಎಂಬ ಕೃತಿಯಲ್ಲಿ ಮಹಾಭಾರತದ ವಿಚಾರಗಳನ್ನು ಚರ್ಚಿಸುತ್ತಿದ್ದರು, ಹಾಗೇ ಸಾಮ್ರಾಜ್ಯ ನಿಬಂಧನಮ್ ಎಂಬ ಗ್ರಂಥವೂ ಇದೆ.

No comments:

Post a Comment