Tuesday, 20 August 2013

ಮಂಗಳಗೌರೀ ವೃತ – ವೈಜ್ಞಾನಿಕ ವಿಶ್ಲೇಷಣೆ

ಮಂಗಳಗೌರೀ ಸಂಕ್ಷಿಪ್ತ ಪೂಜಾ ಕಾರಿಕೆ:-

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶೌಚಾದಿಗಳನ್ನು ಮುಗಿಸಿ ಶುಭಮುಹೂರ್ತದಲ್ಲಿ ನದೀತೀರಕ್ಕೆ ಹೋಗಿ ನದೀಪೂಜೆಯನ್ನು ಮಾಡಿ ಸಂಕಲ್ಪ ಮಾಡಿಕೊಂಡು ನದಿಯಲ್ಲಿ ಸ್ನಾನ ಮಾಡಿ ಮುಳುಗಿ ತಳದಲ್ಲಿರುವ ಮಣ್ಣನ್ನು ಬೊಗಸೆಯಲ್ಲಿ ತೆಗೆದುಕೊಂಡು ಮೇಲೆ ಬಂದು ಪುನಃ ಗಂಗಾವರುಣ ಪೂಜೆ ಮಾಡಿ ಇಟ್ಟು ಅದನ್ನೇ ಪ್ರತಿಮೆಯಾಗಿ ಬಳಸಿಕೊಳ್ಳಬೇಕು. ಮಂಟಪ ರಚಿಸಿ ತಳಿರು ತೋರಣಗಳಿಂದ ಅಲಂಕರಿಸಿ ರಂಗವಲ್ಯಾದಿಗಳಿಂದ ಅಷ್ಟದಳ ಪದ್ಮವನ್ನು ಬರೆದು ಪೂಜೆಗೆ ಅಗತ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡು ಪೂಜೆ ಮಾಡುವುದು. ಆದಷ್ಟು ಸ್ವತಃ ಪೂಜಾವಿಧಾನವನ್ನು ಕಲಿತು ಮಾಡುವುದು ಉತ್ತಮ.

ವೈಜ್ಞಾನಿಕ ವಿಶ್ಲೇಷಣೆ:-

ಒಟ್ಟು ಸೃಷ್ಟಿ ಸಂಕುಲದ ಪ್ರಸಕ್ತ ಶ್ವೇತವರಾಹ ಕಲ್ಪದ ಮನ್ವಂತರ ಎಂಬ ಕಾಲಗಣನೆಯಲ್ಲಿ ೧೪ ಮನ್ವಂತರಗಳಿವೆ:-

 1. ಸ್ವಾಯಂಭುವ ಮನ್ವಂತರ
 2. ಸ್ವಾರೋಚಿಷ ಮನ್ವಂತರ
 3. ಉತ್ತಮ ಮನ್ವಂತರ
 4. ತಾಮಸ ಮನ್ವಂತರ
 5. ರೈವತ ಮನ್ವಂತರ
 6. ಚಾಕ್ಷುಷ ಮನ್ವಂತರ
 7. ವೈವಸ್ವತ ಮನ್ವಂತರ
 8. ಸೂರ್ಯಸಾವರ್ಣಿ ಮನ್ವಂತರ
 9. ಧರ್ಮಸಾವರ್ಣಿ ಮನ್ವಂತರ
 10. ದಕ್ಷಸಾವರ್ಣಿ ಮನ್ವಂತರ
 11. ರುದ್ರಸಾವರ್ಣಿ ಮನ್ವಂತರ
 12. ಬ್ರಹ್ಮಸಾವರ್ಣಿ ಮನ್ವಂತರ
 13. ಇಂದ್ರಸಾವರ್ಣಿ ಮನ್ವಂತರ
 14. ವೇದಸಾವರ್ಣಿ ಮನ್ವಂತರ.
ಅದರ ಕಾಲಮಾನ ಬ್ರಹ್ಮಮಾನದ ಯುಗಾವರ್ತನೆ 36. ಅಂದರೆ 4 ಯುಗಗಳು 36 ಬಾರಿ ಆವರ್ತನೆಯಾದರೆ ಒಬ್ಬ ಮನು. ಪ್ರತೀ ಮನುವಿನ ಕಾಲದಲ್ಲಿ ಈ ದಶಾವತಾರ ಪುನರಾವರ್ತನೆ ಆಗುತ್ತದೆ ಬೇರೆ ಬೇರೆ ರೂಪದಲ್ಲಿ. ಒಟ್ಟು 36 x 14 = 504. ಇದು ಬ್ರಹ್ಮನ ಪರಾರ್ಧ. ಪೂರ್ವಾರ್ಧವು ಸುಷುಪ್ತಾವಸ್ಥೆಯಲ್ಲಿದ್ದ ವಿಷ್ಣುವಿನ ಯೋಗನಿದ್ರೆಯಲ್ಲಿ ಕಳೆದಿದೆ. ಈ ಪರಾರ್ಧ ಕಳೆದರೆ ಈ ಬ್ರಹ್ಮನ ಅಧಿಕಾರಾವಧಿ ಮುಗಿಯಿತು.

ಸೃಷ್ಟಿಯ ಆದಿಯಿಂದಲೂ ಮುಂದೇನು? ಎನ್ನುವ ಪ್ರಶ್ನೆಯು ಸದಾ ಜೀವಂತವಾಗಿರುತ್ತಾ ಪ್ರಕೃತಿಯ ಬೆಳವಣಿಗೆಗೆ ಕಾರಣವಾಗಿರುತ್ತೆ. ಆ ಕುತೂಹಲ ಜನಿತ ಸಂಶೋಧನೆಯೇ ಜೀವೋತ್ಪಾದನೆ. ಪುನಃಸೃಷ್ಟಿ ಸಂಶೋಧಿತ ಜ್ಞಾನದಿಂದಾಗಿ ಬೇಕಾದಾಗ ಬೇಕಾದ ಉತ್ಪಾದನೆ, ನಾಶ ಇತ್ಯಾದಿ ವಿಪ್ಲವಗಳ ಕಾಲವೇ ಸ್ವಯಂಭೂ ಮನುವಿನ ಕಾಲ. ಆಗ ಯಾರಿಗೆ ಯಾರೂ ಏನೂ ಅಲ್ಲದ ಭಾವನಾತ್ಮಕ ಬಂಧ, ಸಂಬಂಧದ ಹೊಂದಾಣಿಕೆಯೇ ಇಲ್ಲದ ಆ ಕಾಲದ ವಿಪ್ಲವ ಹೇಗಿರಬಹುದು? ಚಿಂತಿಸಿ.

ಆಗ ಆ ಕಾಲದ ದಾರ್ಶನಿಕರು ಸ್ವಯಂಭೂತತ್ವವನ್ನು ಸ್ಥಂಭಿಸಿ ಸ್ವಾರೋಚಿಷ ಸಿದ್ಧಾಂತಕ್ಕೆ ಸಮಾಜವನ್ನು ಒಡಂಬಡಿಸಿ ಉತ್ಪಾದನೆಯು ಒಂದು ಕ್ರಮಬದ್ಧತೆಗೆ ಅಳವಡಿಸಲ್ಪಡಲಿ, ಅದು ಪ್ರಕೃತಿಯ ಅಧೀನವಾಗಿರಲಿ, ಪ್ರಾಕೃತಿಕ ನಿಯಮಕ್ಕೆ ಬದ್ಧವಾದ ರೀತಿಯಲ್ಲೇ ಜೀವೋತ್ಪತ್ತಿಯಾಗಲಿ ಎಂದು ನಿರ್ದೇಶಿಸಿದರು. ಅದರಂತೆ ಪ್ರಕೃತಿಯನ್ನು ಹೆಣ್ಣಿನಲ್ಲಿ ಆವಿರ್ಭವಿಸುವಂತೆಯೂ, ಹೆಣ್ಣು ಅದನ್ನು ಧಾರಣೆ ಮಾಡುವಂತೆಯೂ ಪ್ರಾರ್ಥಿಸಿ, ಅದರಂತೆ ಜೀವೋತ್ಪತ್ತಿಗೆ ಒಂದು ನಿಯಮಿತತೆ ತಂದರು. ಅಲ್ಲಿಂದ ಹೆಣ್ಣು ಮಾತೃ ರೂಪಿಣಿಯಾದಳು. ಅಲ್ಲಿಂದ ಸೃಷ್ಟಿಯ ಅಧಿಕಾರ ಹೆಣ್ಣಿನದ್ದಾಗಿದ್ದು ಗಂಡಿನ ಸಹಯೋಗದಿಂದಲೇ ಪುನಃಸೃಷ್ಟಿ ಸಾಧ್ಯವಾಗುವ ಸಿದ್ಧಾಂತ ಬಳಕೆಯಲ್ಲಿ ಬಂದಿತು. ಅಂದಿನಿಂದ ಇಂದಿನವರೆಗೆ ಹಲವು ಮನ್ವಂತರಕಾಲ ಜೀವೋತ್ಪಾದನೆ ಆರೋಗ್ಯಕರವಾಗಿಯೇ ಬೆಳೆದು ಬಂದಿದೆ. ಹಾಗೆಯೇ ಹೆಣ್ಣು ತನ್ನ ಮೂಲಭೂತಗುಣವಾದ ಸಹನೆ – ಕ್ಷಮೆ – ಧಾರಣಾಶಕ್ತಿ – ಶೀಲ – ತ್ಯಾಗ – ಉದಾರತೆಗಳನ್ನು ಉಳಿಸಿಕೊಂಡು ಬಂದಿದ್ದಾಳೆ. ಆಕೆ ಮಾತೃ, ಜಗತ್ತಿನ ಕೀಲಿಕೈ.

ಈ ಸಿದ್ಧಾಂತಕ್ಕೆ ಪ್ರಪಂಚದ ಜೀವಬೆಳೆ ತೆಗೆಯುವ ಹೆಣ್ಣಿನ್ನಲ್ಲಿರುವ ಆ ರಹಸ್ಯವಿಧ್ಯೆಯ ಮೂಲವೇ ಗೌರೀವಿಧ್ಯೆ. ಅದು ತಲತಲಾಂತರದಿಂದಲೂ ತಾಯಿಯಿಂದ ಮಗಳಿಗೆ ದತ್ತವಾಗಿ ಕೊಡಲ್ಪಡುತ್ತಾ ಅದನ್ನು ಕಾಪಾಡಿಕೊಂಡು ಬರುತ್ತಿದ್ದಾಳೆ. ಉತ್ತಮ ಸಂತಾನ, ಪ್ರಾಕೃತಿಕ ಸಮತೋಲನ, ಜ್ಞಾನ ಸಂವರ್ಧನೆ, ಸದೃಢಸಮಾಜ, ಪೂರಕ ಆಹಾರದ ಹೊಣೆ ಹೊತ್ತ ಹೆಣ್ಣು ಸದಾ ಜಾಗೃತಳಾಗಿರಲು ಈ ಗೌರೀಪೂಜೆಯೆಂಬ ವಿಧ್ಯೆ ಸಹಕಾರಿ. ಇಲ್ಲಿ ಸಾಂಕೇತಿಕವಾಗಿ ಗೌರೀಪಜೆ ಇರುತ್ತದೆ. ವಿಧ್ಯಾಸ್ವರೂಪ ಬೇರೆ ಇದೆ. ಅದನ್ನು ಪ್ರತಿದಿನವೂ ಅನುಷ್ಠಿಸಿಕೊಂಡ ಬರುವುದರಿಂದ ಹೆಣ್ಣು ತಾಯಿ ಎನಿಸಿಕೊಳ್ಳುತ್ತಾಳೆ. ಅವಳಿಂದ ಮಾತ್ರ ಸಮಾಜದ ವಿಕೃತತಯನ್ನು ಹಿಡಿತದಲ್ಲಿಟ್ಟಕೊಳ್ಳಬಹುದೇ ವಿನಃ ಬೇರೆ ಯಾವುದೇ ವಿಧಾನದಿಂದಲೂ ಸಾಧ್ಯವಿಲ್ಲ. ಹಾಗಾಗಿ ಓ ತಾಯಿಯರೇ! ನೀವು ಸಾಕ್ಷಾತ್ ಗೌರಿಯರಾಗಿ ಸಮಾಜದ ಮೇಲೆ ನಿಮ್ಮ ಹಿಡಿತ ಸಾಧಿಸಿ. ಈಗ ನಡೆಯುತ್ತಿರುವ ಕೊಲೆ, ಸುಲಿಗೆ, ದರೋಡೆಯಾದಿಯಾಗಿ ಅನೈತಿಕತೆಯನ್ನು ಮಟ್ಟ ಹಾಕಿ ಆರೋಗ್ಯಕರ ಸಮಾಜಕ್ಕೆ ಭದ್ರಬುನಾದಿ ಹಾಕಿ ಎಂದು ಪ್ರಾರ್ಥಿಸುತ್ತೇನೆ.

ಶ್ರಾವಣ ಮಾಸದ ಮಂಗಳವಾರದಂದು ಈ ವೃತ ಆಚರಿಸುತ್ತಾರೆ. ಸುಮಂಗಲಿಯರು ದೀರ್ಘಸೌಮಂಗಲ್ಯ ವೃದ್ಧಿಗಾಗಿ ಆಚರಿಸುವ ಈ ವೃತವು ಕುಟುಂಬರಕ್ಷಣೆ, ಅಭವೃದ್ಧಿ, ಸಂತಾನ, ಆರೋಗ್ಯದ ಕಾರಣದಿಂದಾಗಿ ಬಳಕೆಗೆ ಬಂದಿರುತ್ತದೆ. ಶ್ರವಣ ನಕ್ಷತ್ರದ ೧೩ನೇ ಅಂಶದಲ್ಲಿ ಹುಣ್ಣಿಮೆ ಘಟಿಸುವುದರಿಂದ ಅದನ್ನು ಶ್ರಾವಣಮಾಸ ಎಂದು ಕರೆದರು. ಅಲ್ಲಿ ಚಂದ್ರನು ಪ್ರೀತಿ ಎಂಬ ವಿಶೇಷ ಕಲೆಯಲ್ಲಿ ವ್ಯವಹರಿಸುವುದರಿಂದ ಜನರ ಮಾನಸಿಕ ಸ್ಥಿತಿಯು ಅಯೋಮಯತೆಯಲ್ಲಿರುತ್ತದೆ. ಅದನ್ನು ಗೆಲ್ಲಲು ಪ್ರೀತಿಯೊಂದೇ ದಾರಿ. ಹಾಗಾಗಿ ಪ್ರತೀ ಮಹಿಳೆಯು ಸಮಾಜದ ದಾರಿದಪವಾದ್ದರಿಂದ ಈ ವೃತ ಮುಖೇನ ಸಮಾಜದಲ್ಲಿ ತಮ್ಮ ಅನುರಾಗದಿಂದ ಸ್ಥಿರತೆ ಕಾಯ್ದುಕೊಂಡು ಬರುವಂತೆ ಈ ವೃತ ಸಂಯೋಜನೆ ಆಗಿರುತ್ತದೆ. ಕರ್ಮಕಾರಣನಾದ ಕುಜನ ಹೋರೆಯಲ್ಲಿ ಸೂರ್ಯೋದಯ ಆಗುವುದರಿಂದ ಇವರ ಅನುಷ್ಠಾನಕ್ಕೆ ವೃತಕ್ಕೆ ತೀಕ್ಷ್ಣತೆ ಸಿಕ್ಕಿ ಒಟ್ಟಾರೆ ಪುರುಷ ಸಮಾಜದ ಮೇಲೆ ಹಿಡಿತ ಸಾಧಿಸಲು ಶಕ್ತತೆ ಉಂಟಾಗುತ್ತದೆ. ಅದಕ್ಕಾಗಿ ಪ್ರತೀ ಮಂಗಳವಾರ ಸುಮಂಗಲಿಯರು ಅಂದರೆ ವಿಶಾಲ ಕೌಟುಂಬಿಕ ಹಿನ್ನಲೆಯಿರುವವರ ಈ ವೃತ ಆಚರಿಸಬೇಕೆಂದು ನಿರ್ದೇಶಿಸಲಾಯ್ತು.

ಮೂಲಕಥೆಯಲ್ಲಿ ಬರುವಂತೆ ವಿಷ್ಣುಶರ್ಮನ ಪ್ರಶ್ನೆಗೆ ಉತ್ತರಿಸುತ್ತ ಜಾಬಾಲ ದಂಪತಿಗಳು ಗೌರೀವಿಧ್ಯೆ ಎಂಬ ಪ್ರಾಕೃತಿಕ ರಹಸ್ಯವನ್ನು ಉಪದೇಶಿಸುತ್ತಾರೆ. ಗೌರೀ ವಿಧ್ಯೆಯೆಂದರೆ ಪ್ರಕೃತಿಯ ಮೂಲಸ್ವರೂಪವಾದ ಪೂಜೆ. ಸ್ವಾಭಾವಿಕ ಪರಿಸರವನ್ನು ಪ್ರೀತಿಸುವುದು, ರಕ್ಷಿಸುವುದು, ಅದನ್ನ ಉಳಸಿ ಬೆಳೆಸುವುದು. ಯಾವಾಗ ಮೂಲಪ್ರಕೃತಿ ರಕ್ಷಣೆಗೆ ನೀನು ಬದ್ಧನಾಗುತ್ತೀಯೋ ಆಗ ಆ ಪ್ರಕೃತಿ ನಿನ್ನನ್ನು ರಕ್ಷಿಸುತ್ತದೆ. “ಧರ್ಮೋ ರಕ್ಷತಿ ರಕ್ಷಿತಃ” ಎಂಬುದು ನಿನಗೆ ತಿಳಿದಿರಬಹುದು. ಮೂಲಪ್ರಕೃತಿಯಾದ ತಾಯಿಯ ಸಹಕಾರದಿಂದ ಬೆಳೆದು, ಆ ತಾಯಿಯ ಸಹವರ್ತಿಯಾಗಿ ದುಡಿದು, ತಾಯಿಯ ಸ್ವರೂಪದಲ್ಲಿ ಪ್ರಕೃತಿಯನ್ನು ಪಡೆದು ಪೋಷಿಸುವುದೇ ಗೌರೀವಿಧ್ಯೆ. ಇದರಿಂದಾಗಿ ಪ್ರಕೃತಿಯ ಪೂರಕಬಲ ಸಹಾಯ ನಿನಗಿರುತ್ತದೆ.

ಹಿಂದೆ ಸ್ತ್ರೀಪುರುಷರಲ್ಲಿ ಸಮಾನ ಕಲಾಂಶವಿದ್ದು ಸ್ವತಂತ್ರಪ್ರವೃತ್ತಿ ಬೆಳೆದು ಅದು ಸಮಸ್ಯೆಗೆ ಕಾರಣವಾಯ್ತು. ಹಾಗಾಗಿ ಸ್ವರೋಚಿಷರು ಸ್ತ್ರೀಪುರುಷ ಸಹಯೋಗದಿಂದ ಮಾತ್ರ ಪ್ರಾಕೃತಿಕ ಬೆಳವಣಿಗೆ ಉಂಟಾಗಲಿ ಎಂದು ಅದರಂತೆ ಪರಿವರ್ತಿಸಿದರು. ಇಲ್ಲಿ ಸ್ತ್ರೀಯಗಲೀ, ಪರುಷನಾಗಲೀ ಹೆಚ್ಚಲ್ಲ. ಆದರೆ ಸ್ತ್ರೀಯಿಲ್ಲದೆ ಪುರುಷನೂ, ಪುರುಷನಿಲ್ಲದೆ ಸ್ತ್ರೀಯೂ ಇಲ್ಲ. ಪರಸ್ಪರ ಅವಲಂಬಿತ ಜೀವನ ನಿರ್ದೇಶಿಸಿದರು. ಹಾಗಾಗಿ ಈ ಸ್ತ್ರೀಯಲ್ಲಿ ಈ ಪ್ರಕೃತಿಸೂತ್ರವನ್ನು ಇಟ್ಟರು. ಹಾಗಾಗಿಯೇ ವಂಶವಾಹಿ ಜೀನುಗಳು ಸ್ತ್ರೀಯಿಂದ ಸ್ತ್ರೀಗೆ ಹರಿದು ಬರುತ್ತಿದೆ.  

 1. ಗೋ
 2. ವಂಶ 
 3. ಆಚಾರ
 4. ಪ್ರಕೃತಿ
 5. ರಕ್ಷಣೆ
 6. ಜ್ಞಾನ
 7. ಅಭಿವೃದ್ಧಿ 
ಎಂಬ ಸಪ್ತವಿಚಾರಗಳು ಸ್ತ್ರೀಯಲ್ಲಿ ಸಪ್ತಧಾತುಗಳಲ್ಲಿ ಸೇರಿರುತ್ತದೆ. ಅದೇ ಗೌರೀ ರಹಸ್ಯ

ಆ ಮುಖೇನ ಸ್ತ್ರೀಯು ಗೌರಿಯನ್ನು ಅಂದರೆ ಪ್ರಕೃತಿಯನ್ನು ಅರಿತು ಪ್ರಾಪಂಚಿಕ ಅಭಿವೃದ್ಧಿಯಲ್ಲಿ ಕರ್ಯೋನ್ಮುಖಳಾಗಿ ಪೂರಕ ಚೈತನ್ಯರೂಪದ ಪುರುಷನ ಬೆಳವಣಿಗೆಗೆ ಕಾರಣಳಾಗುತ್ತಾಳೆ. ರಕ್ಷಣೆ ಮಾಡುತ್ತಾಳೆ, ಜ್ಞಾನ ತುಂಬುತ್ತಾಳೆ, ಸಂಪತ್ತು ಸಮೃದ್ಧಿಗೆ ಕಾರಣಳಾಗುತ್ತಾಳೆ. ಹಿರಿಯರ ಅನುಗ್ರಹದಿಂದ ನಿರೋಗಿಯಾಗವಂತೆ ಮಾಡುತ್ತಾಳೆ. ತತ್ಕಾರಣವಾಗಿ ಸದೃಢ ಸಮಾಜ ಸೃಷ್ಟಿಯಾಗುತ್ತದೆ. ಹಾಗಾಗಿ ಗೌರೀವಿಧ್ಯೆಯು ಮೂಲಪ್ರಕೃತಿಯಾದ ಸ್ತ್ರೀಯಲ್ಲಿದೆ. ಅದನ್ನು ಅರಿತು ವ್ಯವಹರಿಸು. ನಿನಗೆ ಶುಭವಾಗುವುದು ಎಂದರು.

ಮುಂದಿನ ಕಥೆಯಲ್ಲಿ ಸಾಕ್ಷಾತ್ ಶಿವನೇ ಗೌರೀವಿಧ್ಯೆಯನ್ನು ಮಾಧವಿಗೆ ಉಪದೇಶಿಸುತ್ತಾನೆ. ಅದರ ಸಾರಾಂಶ ಇಂತಿದೆ. ಪ್ರೀತಿಯಿಂದ ಗೆಲ್ಲಲಾಗದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ. ಪುರುಷ ಸಮಾಜಕ್ಕೆ ಸನ್ಮಾರ್ಗದರ್ಶನ ಮಾಡುವ ಗೌರೀವಿಧ್ಯೆಯನ್ನು ಪ್ರಚಾರ ಮಾಡಿರಿ. ಪ್ರೀತಿಯಿಂದ ಪುಂ ಶಕ್ತಿಯನ್ನು ಸನ್ಮಾರ್ಗದತ್ತ ನಡೆಸಿರಿ. ಪುರುಷಶಕ್ತಿಯೊಂದಿಗೆ ಪೈಪೋಟಿಗಿಳಿಯಬೇಡ, ಗೆಲ್ಲಲಾರೆ. ಆದರೆ ಪ್ರೀತಿಯಿಂದ ಗೆಲ್ಲಬಹುದು ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಶಿವೈಕ್ಯಳಾಗು. ಇದೇ ನಿನ್ನ ಗುರಿ. ಇದು ಶಿವಾಜ್ಞೆ ಅರಿತುಕೊ. ಈ ಗೌರೀವಿಧ್ಯೆ ಖಂಡಿತವಾಗಿ ವಿಪುಲಸಂಪತ್ತನ್ನೂ, ಶಾಂತಿಯನ್ನೂ, ನೆಮ್ಮದಿಯನ್ನೂ ಕರುಣಿಸುತ್ತದೆ. ಅದರಿಂದಾಗಿ ಆರೋಗ್ಯಕರ ಜೀವನ ಸಿದ್ಧಿಯಾಗುತ್ತದೆ.

ಇನ್ನು ನವವಿವಾಹಿತೆಯು ಈ ಮಂಗಳಗೌರೀ ವೃತವನ್ನು ಆರಂಭಿಸುತ್ತಾಳೆ. ಮುಂದೆ ಸ್ವರ್ಣಗೌರಿಯನ್ನೂ ಉಪಾಸಿಸುತ್ತಾಳೆ. ನಿತ್ಯ ಗೌರೀ ಪೂಜೆಯೇ ಸ್ತ್ರೀಯ ಅಧಿಕಾರ ಮತ್ತು ಕರ್ತವ್ಯ. ಅವಳು ಮೊದಲು ವಧುವಾಗಿ ಬಂದು ಮುಂದೆ ಕುಲವಧುವೆನ್ನಿಸಿ ಬಾಳಬೇಕು. ವಧು ಎಂದರೆ ಶ್ರೇಷ್ಠತೆಯತ್ತ ಮಾರ್ಗದರ್ಶನ ಮಡುವವಳೂ, ಶ್ರೇಷ್ಠತ್ವ ದರ್ಶಕಳೂ ಎಂದು ಅರ್ಥವಾಗುತ್ತದೆ ಅಥವಾ ಶ್ರೇಷ್ಠವನ್ನೇ ನೋಡುವವಳು ಎಂದೂ ಅರ್ಥೈಸಬಹುದು. ಇನ್ನು ಮುಂದೆ ನೀನು ಹುಟ್ಟಿದ ಮತ್ತೆ ಸೇರಿದ ಎರಡೂ ಕುಲದ ಮಧುರ ಬಾಂಧವ್ಯ ಉಳಿಸಿ ಬೆಳೆಸಿ ಶ್ರೇಷ್ಠತೆಯತ್ತ ಕೊಂಡೊಯ್ಯ ಬೇಕಾದವಳು. ಹಾಗಾಗಿ ಕುಲವಧುವೆಂದು ಕರೆಸಿಕೊಳ್ಳುತ್ತೀಯ. ಅದಕ್ಕೆ ಬೇಕಾದ ಧೀ ಶಕ್ತಿಯೇ ನಿನಗೆ ಗೌರಿ. ಆ ತಾಯಿಯನ್ನು ಮರೆಯಬೇಡ. ಈ ವರನೇ ನಿನಗೆ ಪ್ರಪಂಚದಲ್ಲಿ ಅತಿಶ್ರೇಷ್ಠ. ಹಾಗಿಲ್ಲದೆ ಏನಾದರೂ ನ್ಯೂನತೆಗಳು ಕಂಡಲ್ಲಿ ಅದನ್ನು ನಿನ್ನ ಪ್ರೀತಿಯಿಂದ ಸರಿಪಡಿಸಿಕೊ. ಕುಲಕ್ಕೆ, ಸಮಾಜಕ್ಕ ಆದರ್ಶಪ್ರಾಯಳಾಗು ಎಂದರು. ಹಾಗೇ ಈಕೆಯನ್ನು ಪಾಲಿಸುವುದು ಎಂದರೆ ಧರ್ಮರಕ್ಷಣೆ ಮಾಡುವುದು ಪತಿಯ ಕರ್ತವ್ಯ. ಈ ಸೂಕ್ಷ್ಮವನ್ನು ಅರಿತು ನಡೆದುಕೊಳ್ಳಬೇಕು. ಸನ್ಮಾರ್ಗದಲ್ಲಿ ಪ್ರವರ್ತಿಸಿ ಜ್ಯೋತಿಗಳಾಗಿರಿ. ಶೀಘ್ರದಲ್ಲಿ ನಿಮಗೆ ಶಿವಾನುಗ್ರಹವಾಗುವುದು. ನಿಮಗೆ ಶುಭವಾಗಲಿ ಎಂದು ಆಶೀರ್ವದಿಸಿದರು. 

                                            || ಸಮಸ್ತ ಸನ್ಮಂಗಳಾನಿ ಭವಂತು ||

No comments:

Post a Comment